ಸರಳವಾಗಿ ನಡೆದ ಮಡಿಕೇರಿ ದಸರಾಕ್ಕೆ ವರ್ಣರಂಜಿತ ತೆರೆ

Public TV
2 Min Read
MDK DASARA

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಸರಳ ರೀತಿಯಲ್ಲಿ ನಡೆದ್ರೂ ವರ್ಣರಂಜಿತ ತೆರೆಬಿದ್ದಿದೆ. ರಾತ್ರಿಯಿಡೀ ನಡೆದ ಮೈನವಿರೇಳಿಸೋ ದಶಮಂಟಪಗಳ ಶೋಭಾಯಾತ್ರೆ ಜನರ ಮನ ಸೂರೆಗೊಂಡಿತು. ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆದ ಅಬ್ಬರದ ಸ್ತಬ್ಧ ಚಿತ್ರ ಪ್ರದರ್ಶನ ಜನರನ್ನ ದೇವಲೋಕಕ್ಕೆ ಕರೆದೊಯ್ದಿತ್ತು. ದುಷ್ಟ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆದ ದಶಮಂಟಪ ಪ್ರದರ್ಶನ ದೇವಾನುದೇವತೆಗಳ ಪವಾಡಕ್ಕೆ ಸಾಕ್ಷಿಯಾದರೆ ಸಹಸ್ರಾರು ಭಕ್ತರು ಭಾವಪರವಶತೆಯಲ್ಲಿ ಮಿಂದೆದ್ದರು.

MDK DASARA 1

ಎಲ್ಲೆಲ್ಲೂ ಜನವೋ ಜನ, ಎತ್ತನೋಡಿದರೂ ಜನಸಾಗರ. ಕಣ್ಣು ಕೋರೈಸೋ ವಿದ್ಯುತ್ ದೀಪಾಲಂಕಾರ, ಹುಚ್ಚೆದ್ದು ಕುಣಿಯುತ್ತಿರೋ ಜನರು, ಅಬ್ಬರದಿಂದ ಪ್ರದರ್ಶನಗೊಂಡ ಸ್ತಬ್ಧ ಚಿತ್ರಗಳು. ಇದು ಮಡಿಕೇರಿ ದಸರಾದ ಕೊನೆಯದಿನದ ಶೋಭಾಯಾತ್ರೆಯ ಚಿತ್ರಣ. ಐತಿಹಾಸಿಕ ಮಡಿಕೇರಿ ದಸರಾಕ್ಕೆ ವಿದ್ಯುಕ್ತ ತೆರೆಬಿದ್ದಿದೆ. ಮಂಜಿನ ನಗರಿ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಪ್ರದರ್ಶನ ಮೈನವಿರೇಳಿಸುವಂತಿತ್ತು. ದೇವಾನು ದೇವತೆಗಳ ಲೀಲೆಗಳನ್ನ ಬಿಂಬಿಸೋ ಕಥಾ ಪ್ರಸಂಗಗಳ ಸಂಯೋಜನೆ ಎಲ್ಲರ ಗಮನಸೆಳೆಯಿತು. ಎದೆನಡುಗಿಸೋ ಶಬ್ದ, ಅದಕ್ಕೆ ತಕ್ಕಂತೆ ಬೆಳಕು. ಇವೆಲ್ಲವುಗಳಿಗೆ ಪೂರಕವಾಗಿ ನರ್ತಿಸೋ ದೇವರ ಮೂರ್ತಿಗಳು ನೆರೆದಿದ್ದ ಜನರನ್ನ ಒಮ್ಮೆ ದೇವಲೋಕಕ್ಕೆ ಸಂಚಾರಮಾಡಿಸಿದಂತಿತ್ತು. ಕೊರೊನಾ ಮಹಾಮಾರಿಯಿಂದ ಕಳೆದ ವರ್ಷ ಕೇವಲ ಸ್ತಬ್ಧ ಮಂಟಪಗಳಿಗೆ ಸೀಮಿತವಾಗಿತ್ತು. ಆದರೆ ಈ ಬಾರಿ ಸರಳ ರೀತಿಯಲ್ಲಿ ದಶಮಂಟಪಗಳ ಶೋಭಾಯತ್ರೆ ಎಲ್ಲಾರನ್ನು ಅಕರ್ಷಣೆ ಮಾಡಿತ್ತು.

MDK DASARA 4

ಹಗಲು ಮೈಸೂರು ದಸರಾದ ವೈಭವನೋಡು ರಾತ್ರಿ ಮಂಜಿನ ನಗರಿ ಮಡಿಕೇರಿ ದಸರಾದ ಸೊಬಗು ನೋಡು ಎಂಬ ಮಾತಿನಂತೆ ಮಡಿಕೇರಿ ದಸರಾ ರಂಗೇರಿತ್ತು, ರಾತ್ರಿ 11 ಗಂಟೆಗೆ ಶುರುವಾದ ದಶಮಂಟಪಗಳ ಉತ್ಸವ ಬೆಳಗ್ಗೆ 5 ಗಂಟೆವರೆಗೂ ನಡೆಯಿತು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಪ್ರವಾಸಿಗರು ಮೆರವಣಿಗೆ ನೋಡಲು ಮುಗಿಬಿದ್ದರು. ಕೊರೋನಾ ಹಿನ್ನೆಲೆ ಜನ ದಟ್ಟಣೆ ಕಡಿಮೆಯಾಗಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದ್ರು ಜಿಲ್ಲೆಗೆ ಬಂದಿದ ಸಾವಿರಾರು ಪ್ರವಾಸಿಗರು ಮಾಸ್ಕ್ ಸಾಮಾಜಿಕ ಅಂತರ ಮರೆತು ಎಂಜಾಯ್ ಮೇಟ್ ಮಾಡುತ್ತಿದ್ದರು. ಇದನ್ನೂ ಓದಿ: ನವದುರ್ಗೆಯರ ವಿಸರ್ಜನಾ ಕಾರ್ಯಕ್ರಮದೊಂದಿಗೆ ಮಂಗಳೂರು ದಸರಾಕ್ಕೆ ತೆರೆ

MDK DASARA 2

ಕೆಲ ಪ್ರಮುಖ ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಓಡಾಟ ನಡೆಸುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿಯನ್ನು ನೀಡಿದರು. ಇನ್ನೂ ರಾತ್ರಿಯಿಡೀ ಮಂಜಿನ ನಗರಿಯ ರಸ್ತೆಗಳಲ್ಲಿ ಜನಪ್ರವಾಹವೇ ಹರಿಯುತ್ತಿತ್ತು. ದೇವಾನುದೇವತೆಗಳ ಶಕ್ತಿ ಲೀಲೆಗಳನ್ನು ಕಣ್ತುಂಬಿಕೊಂಡ ಜನತೆ ಖುಷಿಯ ಅಲೆಯಲ್ಲಿ ತೇಲಿದರು. ನಗರದ ಬೀದಿ ಬೀದಿಗಳಲ್ಲಿ ಪ್ರದರ್ಶನಗೊಂಡ ಆಂಜನೇಯನದರ್ಶನ, ಆದಿ ಶಕ್ತಿಯಿಂದ ಶುಂಭ ನೀಶುಂಭರ ಸಂಹಾರ, ಗಣಪತಿಯಿಂದ ಗಜಾಸುರನವಧೆ ಚಂಡ ಮುಂಡರ ವಧೇ ಸೇರಿದಂತೆ ಹಲವು ಪುರಾಣ ಹಾಗೂ ಪೌರಾಣಿಕ ಕಥಾವಸ್ತುಗಳನ್ನು ನಿರೂಪಿಸಿ ನೀಡಿದ್ದಾರೆ. ಇದನ್ನೂ ಓದಿ: IPL ಬೆಟ್ಟಿಂಗ್ ಕಿಂಗ್ ಪಿನ್‍ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ

MDK DASARA 3

ಒಟ್ಟಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ತೆರೆಬೀಳುತ್ತಿದ್ದಂತೆ ಶುರುವಾಗೋ ಮಂಜಿನ ನಗರಿ ದಸರಾ ಅಬ್ಬರ ಸಹಸ್ರಾರು ಜನರ ಸಂಬ್ರಮೋಲ್ಲಾಸಕ್ಕೆ ಕಾರಣವಾಗುತ್ತೆ. ವಿವಿಧ ಜಿಲ್ಲೆಗಳಿಂದ ಬರೋ ಸಹಸ್ರಾರು ಪ್ರವಾಸಿಗರು ಕೊರೊನಾ ಅತಂಕವನ್ನು ಎಲ್ಲಾ ಮರೆತು ದಸರಾ ಸಂಭ್ರಮಾಚರಣೆ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *