ಜಗನ್ಮಾತೆ ದುರ್ಗೆಯ ಆರನೇ ಸ್ವರೂಪದ ಹೆಸರು ಕಾತ್ಯಾಯನೀ. ಕಾತ್ಯಾಯನೀ ಹೆಸರು ಬರಲು ಒಂದು ಪುರಾಣ ಕಥೆಯಿದೆ. ಭಗವತಿಯೂ ತನ್ನ ಪುತ್ರಿಯ ಅವತಾರದಲ್ಲಿ ಜನಿಸಬೇಕೆಂದು ಕಾತ್ಯಯನ ಮಹರ್ಷಿ ಹಲವು ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದ್ದರು. ಕಾತ್ಯಯನ ಭಕ್ತಿಗೆ ಮೆಚ್ಚಿ ಭಗವತಿಯು ಅವರ ಈ ಪ್ರಾರ್ಥನೆಯನ್ನು ನಡೆಸಿಕೊಟ್ಟಳು.
ಕೆಲ ಕಾಲಾಂತರದಲ್ಲಿ ಭೂಮಿಯಲ್ಲಿ ಮಹಿಷಾಸುರನ ಉಪಟಳ ಹೆಚ್ಚಾಗತೊಡಗಿತು. ಈ ಸಮಯದಲ್ಲಿ ಬ್ರಹ್ಮ, ವಿಷ್ಣು, ಈಶ್ವರ ಮತ್ತು ಎಲ್ಲ ದೇವತೆಗಳು ತಮ್ಮ-ತಮ್ಮ ತೇಜದ ಅಂಶವನ್ನಿತ್ತು ಮಹಿಷಾಸುರನ ವಿನಾಶಕ್ಕಾಗಿ ಓರ್ವ ದೇವಿಯನ್ನು ಸೃಷ್ಟಿಸಿದರು. ಬಳಿಕ ಆ ದೇವಿಯನ್ನು ಮಹರ್ಷಿ ಕಾತ್ಯಾಯನರು ಮೊಟ್ಟಮೊದಲ ಬಾರಿಗೆ ಪೂಜೆ ಮಾಡಿದರು. ಭಾದ್ರಪದ ಕೃಷ್ಣ ಚತುದರ್ಶಿಯಂದು ಆಶ್ವೀನ ಶುಕ್ಲ ಸಪ್ತಮಿ, ಅಷ್ಟಮಿ, ನವಮಿಯವರೆಗೆ ಮೂರು ದಿನ ಕಾತ್ಯಾಯನ ಋಷಿಯ ಪೂಜೆಯನ್ನು ಸ್ವೀಕರಿಸಿ ನಂತರ ದಶಮಿಯಂದು ಮಹಿಷಾಸುರನ್ನು ದೇವಿ ಸಂಹರಿಸಿದ್ದಳು. ಕಾತ್ಯಾಯನರು ಮೊದಲ ಪೂಜೆ ಮಾಡಿದ ಹಿನ್ನೆಲೆಯಲ್ಲಿ ದೇವಿಯನ್ನು ಕಾತ್ಯಾಯನೀ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?
Advertisement
Advertisement
ಭಗವಾನ್ ಕೃಷ್ಣನನ್ನು ಪತಿಯಾಗಿ ಪಡೆಯಲು ಗೋಪಿಕೆಯರು ಕಾಳಿಂದಿ-ಯಮುನೆಯ ತೀರದಲ್ಲಿ ಕಾತ್ಯಾಯನಿಯನ್ನು ಪೂಜಿಸಿದ್ದರು. ಇವಳು ವ್ರಜಮಂಡಲದ ಅಧಿಷ್ಠಾತ್ರಿ ದೇವಿಯಾಗಿ ಪ್ರತಿಷ್ಠಿತವಾಗಿದ್ದಾಳೆ. ಇವಳ ಸ್ವರೂಪವು ಅತ್ಯಂತ ಭವ್ಯ ಹಾಗೂ ದಿವ್ಯವಾಗಿದೆ. ಇವಳ ಬಣ್ಣವು ಬಂಗಾರದಂತೆ ಹೊಳೆಯುತ್ತದೆ. ಇವಳಿಗೆ ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈಯು ಅಭಯ ಮುದ್ರೆಯಲ್ಲಿದೆ, ಕೆಳಗಿನ ಕೈಯು ವರಮುದ್ರೆಯಲ್ಲಿದೆ, ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದೆ, ಕೆಳಗಿನ ಕೈಯಲ್ಲಿ ಕಮಲಪುಷ್ಪವಿದ್ದು ಇವಳ ವಾಹನ ಸಿಂಹವಾಗಿದೆ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?
Advertisement
Advertisement
ಈ ದೇವಿಯ ಪೂಜೆಯ ದಿನದಂದು ಸಾಧಕನ ಮನಸ್ಸು ‘ಆಜ್ಞಾ’ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಯೋಗಸಾಧನೆಯಲ್ಲಿ ಈ ಆಜ್ಞಾ ಚಕ್ರದ ಸ್ಥಾನ ಅತ್ಯಂತ ಮಹತ್ವ ಪೂರ್ಣಸ್ಥಾನವಿದೆ. ಈ ಚಕ್ರದಲ್ಲಿ ಸ್ಥಿತವಾದ ಮನಸ್ಸುಳ್ಳ ಸಾಧಕನು ತಾಯಿ ಕಾತ್ಯಾಯನಿಯ ಚರಣಗಳಲ್ಲಿ ತನ್ನ ಸರ್ವಸ್ವವನ್ನು ಅರ್ಪಿಸಿಕೊಳ್ಳುತ್ತಾನೆ. ಪೂರ್ಣವಾಗಿ ಆತ್ಮಸಮರ್ಪಣ ಮಾಡುವ ಇಂತಹ ಭಕ್ತನಿಗೆ ಸಹಜಭಾವದಿಂದ ಕಾತ್ಯಾಯನೀ ದೇವಿಯ ದರ್ಶನ ಪ್ರಾಪ್ತವಾಗುತ್ತದೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ
ಕಾತ್ಯಾಯನಿಯ ಭಕ್ತಿ ಮತ್ತು ಉಪಾಸನೆಯ ಮೂಲಕ ಮನುಷ್ಯನಿಗೆ ಸುಲಭವಾಗಿ ಅರ್ಥ, ಧರ್ಮ, ಕಾಮ, ಮೋಕ್ಷವೆಂಬ ನಾಲ್ಕು ಫಲಗಳ ಪ್ರಾಪ್ತಿಯಾಗುತ್ತದೆ. ಅವನು ರೋಗ, ಶೋಕ, ಸಂತಾಪ, ಭಯ ಮುಂತಾದವುಗಳು ಪೂರ್ಣವಾಗಿ ನಾಶವಾಗುತ್ತದೆ. ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡಲು ಕಾತ್ಯಾಯನಿಯ ಉಪಾಸನೆಗಿಂತ ಸುಗಮ ಹಾಗೂ ಸರಳವಾದ ಮಾರ್ಗವು ಮತ್ತೊಂದಿಲ್ಲ. ಇವಳ ಉಪಾಸಕ ಯಾವಾಗಲೂ ಇವಳ ಸಾನ್ನಿಧ್ಯಲ್ಲಿ ಇದ್ದು ಪರಮಪದದ ಅಧಿಕಾರಿಯಾಗುತ್ತಾನೆ ಎನ್ನುವ ನಂಬಿಕೆಯಿದೆ.