ಮೈಸೂರು: ದೇಶದೆಲ್ಲೆಡೆ ಇಂದು ಆಯುಧ ಪೂಜೆ. ಮೈಸೂರಿನ (Mysuru) ಅಂಬಾವಿಲಾಸ ಅರಮನೆಯಲ್ಲಿ ಆಯುಧಪೂಜೆ (Ayudha Pooje) ಸಂಭ್ರಮ ಕಳೆಗಟ್ಟಿದ್ದು, ಯದುವೀರ್ ಒಡೆಯರ್ (Yaduveer Wadiyar) ಅವರು ಪೂಜೆ ಕಾರ್ಯ ನೆರವೇರಿಸಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ಚಂಡಿಕಾ ಹೋಮ ಆರಂಭವಾಗಿದ್ದು, ಬಳಿಕ 7:55ಕ್ಕೆ ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಕೊಂಡೊಯ್ಯಲಾಗಿದೆ. ಬಳಿಕ ಆಯುಧಗಳನ್ನು ಶುಚಿಗೊಳಿಸಿ ವಾಪಸ್ ಅರಮನೆಗೆ ರವಾನಿಸಲಾಗುತ್ತದೆ. ಅರಮನೆಯ ಆನೆಬಾಗಿಲು ಮೂಲಕ ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಜೋಡಣೆ ಮಾಡಿ, ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಮಾಡಲಾಗುತ್ತದೆ. ಆ ನಂತರ ರಾಜಪುರೋಹಿತರ ಮಾರ್ಗದರ್ಶನದಂತೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧ ಪೂಜೆ ನೆರವೇರಿಸಿದ್ದಾರೆ. ಇದನ್ನೂ ಓದಿ: ಆಯುಧ ಪೂಜೆಗೆ ಖರೀದಿ ಭರಾಟೆ ಜೋರು – ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್ ಸುತ್ತ ಟ್ರಾಫಿಕ್ ಜಾಮ್
ಕರಿಕಲ್ಲು ತೊಟ್ಟಿಯಲ್ಲಿ ಯದುವೀರರಿಂದ ಪೂಜೆ ನಡೆಯುತ್ತಿದ್ದು, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸು, ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆ ಮಾಡಲಾಗುತ್ತದೆ.
ಇನ್ನೂ ಸಂಜೆ ಖಾಸಗಿ ದರ್ಬಾರ್ ನಡೆಯಲಿದ್ದು, ಬೆಳ್ಳಿದ್ವಾರದಿಂದ ರಾಜರು ಪ್ರವೇಶಿಸುತ್ತಾರೆ. ಈ ಸಂದರ್ಭದಲ್ಲಿ ಹಸ್ತಲಾಘವದ ಮೂಲಕ ಸಿಂಹಾಸನದ ಏಳು ಮೆಟ್ಟಿಲು ಏರುತ್ತಾರೆ. ಸಿಂಹಾಸನವೇರಿ ರಾಜರು ದರ್ಬಾರ್ ಮಾಡುತ್ತಾರೆ. ದರ್ಬಾರ್ ಬಳಿಕ ಸಂಸ್ಥಾನ ಗೀತೆಯನ್ನು ಪೊಲೀಸ್ ಬ್ಯಾಂಡ್‌ನಲ್ಲಿ ನುಡಿಸಲಾಗುತ್ತದೆ. ಸಭಾಸದರು ರಾಜರಿಗೆ ಗೌರವ ಮತ್ತು ರಕ್ಷೆ ನೀಡುತ್ತಾರೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ರವರಿಗೆ ಪರಾಕ್‌ಗಳನ್ನ ಕೂಗಲಾಗುತ್ತದೆ. ರಾಣಿಯವರು ಬಂದು ರಾಜರಿಗೆ ನಮಸ್ಕರಿಸುತ್ತಾರೆ. ಬಳಿಕ ದರ್ಬಾರ್ ಮುಗಿಸಿ ಪೂಜೆ ನಡೆಸಲಾಗುತ್ತದೆ. ಬಳಿಕ ಕಂಕಣ ವಿಸರ್ಜನೆ ಮಾಡಿದಾಗ ನವರಾತ್ರಿ ಪೂಜೆ ಸಂಪನ್ನವಾಗುತ್ತದೆ. ಈ ವೇಳೆ ರಾಣಿಯವರಿಂದ ಮಹಾರಾಜರ ಪಾದ ಪೂಜೆ ನೆರವೇರಿಸಿ, ಆಯುಧ ಪೂಜೆ ದಿನದ ಎಲ್ಲಾ ಪೂಜೆ ಕೈಂಕರ್ಯಗಳು ಮುಕ್ತಾಯವಾಗುತ್ತವೆ.ಇದನ್ನೂ ಓದಿ: ಯಾವುದೇ ಹಬ್ಬಕ್ಕೆ ಮನೆಯಲ್ಲೇ ಮಾಡಿ ಸಿಹಿಯಾದ, ರುಚಿಯಾದ ಎರಿಯಪ್ಪ