ಗರ್ಬಾ (Garba) ಎನ್ನುವುದು ಒಂದು ಸಾಂಸ್ಕೃತಿಕ ನೃತ್ಯ. ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆರಾಧನೆಗಾಗಿ, ತಮ್ಮ ಪ್ರಾರ್ಥನೆಯನ್ನು ಈಡೇರಿಸಲು ಮನಪೂರ್ವಕವಾಗಿ ಮಾಡುವ ಏಕೈಕ ನೃತ್ಯವೇ ಗರ್ಬಾ.
ಈ ನೃತ್ಯ ಶೈಲಿ ಮೂಲತಃ ಗುಜರಾತ್ (Gujarat) ರಾಜ್ಯದಲ್ಲಿ ಪ್ರಾರಂಭವಾದದ್ದು. ಪ್ರಾಚೀನ ಕಾಲದಿಂದಲೂ ದೇವಿಯ ಆರಾಧನೆಗಾಗಿ ಈ ನೃತ್ಯವನ್ನು ಮಾಡಲಾಗುತ್ತಿತ್ತು ಎನ್ನಲಾಗಿದೆ. ವಿಶೇಷವಾಗಿ ನವರಾತ್ರಿ ಸಂದರ್ಭದಲ್ಲಿ ದೇವಿಯ ಆರಾಧನೆಗಾಗಿ ಮಹಿಳೆಯರ ಗುಂಪು ಈ ನೃತ್ಯವನ್ನು ಮಾಡುತ್ತಿದ್ದರು. ಅಂದಿನಿಂದ ಪ್ರಾರಂಭವಾದ ಈ ನೃತ್ಯ ಇಂದಿಗೂ ನವರಾತ್ರಿ ಸಂದರ್ಭದಲ್ಲಿ ಎಲ್ಲರ ಮನೆ ಮಾತಾಗಿದೆ.
ಗರ್ಬಾ ಎಂಬುದು ಗರ್ಭ ಎಂಬ ಪದದಿಂದ ಬಂದಿದೆ. ಗರ್ಭ ಎಂದರೆ ಒಂದು ಸೃಷ್ಟಿಸುವ ಶಕ್ತಿ, ಜೀವಶಕ್ತಿ ಎಂಬ ಅರ್ಥವನ್ನು ಹೊಂದಿದೆ. ದೀಪವೊಂದನ್ನು ಮಡಿಕೆಯಲ್ಲಿ ಇಟ್ಟು ಅದನ್ನು ಸುತ್ತುವರೆದು ಮಾಡುವ ನೃತ್ಯವೇ ಗರ್ಬಾ ಎಂದು ಕರೆಯುತ್ತಾರೆ. ಈ ಮೂಲಕ ದೇವಿಗೆ ತಮ್ಮ ಪ್ರಾರ್ಥನೆ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ನೃತ್ಯ ಮಾಡುತ್ತಾರೆ. ಹೀಗೆ ದೀಪವನ್ನ ಮಡಿಕೆಯಲ್ಲಿ ಇಟ್ಟು ಮಾಡುವುದು ಶಕ್ತಿ ಹಾಗೂ ಭಕ್ತಿಯ ಪ್ರತೀಕ ಎನ್ನಲಾಗುತ್ತದೆ.
ಪ್ರಾರಂಭವಾಗಿದ್ದು ಹೇಗೆ?
ಮಧ್ಯಯುಗದ ಸಂದರ್ಭದಲ್ಲಿ ದೇವಾಲಯಗಳಲ್ಲಿ, ತಮ್ಮ ಊರ ಹಬ್ಬಗಳಲ್ಲಿ ಕೆಲ ಸಮುದಾಯಗಳು ಈ ಆಚರಣೆಯನ್ನು ಪ್ರಾರಂಭಿಸಿದವು. ಅಲ್ಲಿಂದ ಪ್ರಾರಂಭವಾದ ಈ ನೃತ್ಯ 20ನೇ ಶತಮಾನದಲ್ಲಿ ನಗರೀಕರಣ ಆರಂಭವಾದಾಗ ಹಾಗೂ ಜನಸಂಖ್ಯೆ ಸ್ಥಳಾಂತರಗೊಂಡಾಗ ಈ ನೃತ್ಯ ಬೇರೆ ಬೇರೆ ಕಡೆ ಹರಡಿತು. ಇದೀಗ ಇದು ಸಾಂಸ್ಕೃತಿಕ ವಿನಿಮಯದ ಸಂಕೇತವಾಗಿ ಪರಿವರ್ತನೆಗೊಂಡಿದೆ. ಹೆಚ್ಚಾಗಿ ಈ ನೃತ್ಯವನ್ನು ದಕ್ಷಿಣ ಭಾರತದಲ್ಲಿ ಮಾಡುತ್ತಾರೆ. ಆದರೆ ಇದೀಗ ದಸರಾ ಸಂದರ್ಭದಲ್ಲಿ ದಕ್ಷಿಣ ಭಾರತ ಸೇರಿದಂತೆ ಭಾರತದ ವಿವಿಧೆಡೆ ಈ ನೃತ್ಯವನ್ನು ಮಾಡುತ್ತಾರೆ.
ಈ ನೃತ್ಯ ದೇವಿ ದುರ್ಗೆಯ ಶಕ್ತಿಯ ಆರಾಧನೆಯೊಂದಿಗೆ ಜನರ ಏಕತೆ ಮತ್ತು ಸಮಾನತೆಯ ಸಂಕೇತವಾಗಿ ಕಾಣಲಾಗುತ್ತದೆ. ಈ ನೃತ್ಯವನ್ನು ಮಾಡುವ ಮೂಲಕ ನಮ್ಮ ತಲೆಮಾರಿಗೂ ಇದನ್ನ ಪರಿಚಯಿಸುವ ಉದ್ದೇಶವನ್ನು ಹೊಂದಿದೆ. ಅದಲ್ಲದೆ ಮುಖ್ಯವಾಗಿ ಜನರು ಒಟ್ಟಾಗಿ ಗರ್ಬಾ ಉತ್ಸವಗಳಲ್ಲಿ ಪಾಲ್ಗೊಳ್ಳುವುದರಿಂದ ಸಾಮಾಜಿಕ ಬಾಂಧವ್ಯ ಹೆಚ್ಚಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗರ್ಬಾ ಫೆಸ್ಟಿವಲ್ ಹಾಗೂ ದಾಂಡಿಯಾ ನೈಟ್ ಎಂದು ಆಚರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಈ ನೃತ್ಯದ ಮೂಲಕ ಸಂಭ್ರಮಿಸುತ್ತಾರೆ. ಅದಲ್ಲದೆ ಕಾಲೇಜುಗಳಲ್ಲಿ, ಇನ್ನಿತರ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಜನರನ್ನು ಒಗ್ಗೂಡಿಸುತ್ತಾರೆ. ಸದ್ಯ ಇದು ಗುಜರಾತ್ ರಾಜ್ಯದ ನೃತ್ಯವಾಗಿರದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಒಂದು ಉತ್ಸವವಾಗಿ ಬೆಳೆದು ನಿಂತಿದೆ.


