ಒಂದೇ ಕತೆಯ ಸಿನಿಮಾದಲ್ಲಿ ದರ್ಶನ್, ಸುದೀಪ್- ಅಭಿಮಾನಿಗಳಿಗೆ ಪತ್ರ ಬರೆದ ಕಿಚ್ಚ

Public TV
2 Min Read
darshan sudeep 1

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಒಂದೇ ಕತೆಯ ಸಿನಿಮಾ ಮಾಡುವ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ರಾಕ್‍ಲೈನ್ ವೆಂಕಟೇಶ್ ಅವರು ಈಗಾಗಲೇ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ದರ್ಶನ್ ಚಿತ್ರದ ನಾಯಕನಾಗಿ ನಟಿಸುವುದಾಗಿ ಹೇಳಿದ್ದರು. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಹೊಣೆ ಹೊತ್ತಿದ್ದರು. ಇದರ ಬೆನ್ನಲ್ಲೇ ಸುದೀಪ್ ಅವರು ಮದಕರಿ ನಾಯಕನ ಕಥೆ ಇರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಸುದೀಪ್ ಅಭಿನಯದ ಈ ಚಿತ್ರಕ್ಕೆ `ದುರ್ಗದ ಹುಲಿ’ ಅಥವಾ `ನಾಯಕ’ ಹೆಸರನ್ನು ಇಡಲು ಚರ್ಚೆ ನಡೆದಿದ್ದು, `ದುರ್ಗದ ಹುಲಿ’ ಟೈಟಲ್ ಅಂತಿಮಗೊಳ್ಳುವ ಸಾಧ್ಯತೆಯಿದೆ. ಕೆಲ ದಿನಗಳಿಂದ ಈ ಚಿತ್ರದ ಕೆಲಸ ಆರಂಭಗೊಂಡಿದ್ದು, ವಿಶೇಷವಾಗಿ ಸುದೀಪ್ ಅವರೇ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಬಗ್ಗೆ ಕಿಚ್ಚ ಸುದೀಪ್ ತಮ್ಮ ಗೂಗಲ್ ಪ್ಲಸ್‍ನಲ್ಲಿ ಅಭಿಪ್ರಾಯ ಬರೆದು ಟ್ವಿಟ್ಟರಿನಲ್ಲಿ ಹಾಕಿದ್ದಾರೆ. ಇದನ್ನೂ ಓದಿ: ಒಂದೇ ಕತೆಯ ಸಿನಿಮಾದಲ್ಲಿ ದಚ್ಚು, ಕಿಚ್ಚ- ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದೇನು?

darshan sudeep 2

ಪೋಸ್ಟ್ ನಲ್ಲಿ ಏನಿದೆ?
ನಾನು ನನ್ನ ತಂಡ ಹಾಗೂ ಕೆಲವು ಲೇಖಕರ ಬಳಗವು ಈಗ್ಗೆ ಒಂದು ಒಂದೂವರೆ ವರ್ಷದಿಂದ `ವೀರ ಮದಕರಿ ನಾಯಕ` ಸಿನಿಮಾ ನಿರ್ಮಾಣದ ದಿಸೆಯಲ್ಲಿ ಕೆಲಸ ಮಾಡುತ್ತಿದೇವೆ. ಈಗಾಗಲೇ ಒಂದಷ್ಟು ಸಂಶೋಧನೆ ಮತ್ತು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ.

ವೀರ ಮದಕರಿ ಸಿನಿಮಾ ಮಾಡುವ ನಮ್ಮ ಅಲೋಚನೆ ವರ್ಷಗಳ ಹಿಂದೆಯೇ ಹುಟ್ಟಿದಂತಹುದು. ಆದರೆ ಈ ದಿಸೆಯಲ್ಲಿ ಕೆಲಸ ಮಾಡಲು ಒಂದಷ್ಟು ಸಮಯ ಬೇಕಾಯಿತು. ಹೀಗಾಗಿ ಈ ಸಿನಿಮಾ ನಿರ್ದೇಶನ ಕೂಡ ಮಾಡುವ ಸ್ಫೂರ್ತಿ ಚಿಗುರೊಡೆಸಿತ್ತು.

Sudeep Darshan

ಇತ್ತೀಚೆಗೆ ಇದೇ ಕಥೆಯ ಆಧಾರಿತ ಮತ್ತೊಂದು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿ ನನಗೆ ನಿಜಕ್ಕೂ ಆಶ್ಚರ್ಯ ಉಂಟು ಮಾಡಿತು. ಸಹಜವಾಗಿಯೇ ನನಗೆ ಇದರಲ್ಲಿ ಏನಿದೆ ಎಂಬ ಪ್ರಶ್ನೆ ಹುಟ್ಟು ಹಾಕಿತು. ಯಾರೇ ಆಗಲೀ ಇತಿಹಾಸದ ವಿಷಯಗಳ ಮೇಲೆ ಸಿನಿಮಾ ನಿರ್ಮಿಸಲು ಅರ್ಹರಿದ್ದಾರೆ.

ಒಂದೇ ವಿಷಯ, ಒಬ್ಬನೇ ವ್ಯಕ್ತಿಯ ಮೇಲೆ ಈಗಾಗಲೇ ಒಂದಕ್ಕಿಂತ ಹೆಚ್ಚು ಸಿನಿಮಾಗಳು ತೆರೆ ಕಂಡ ಉದಾಹರಣೆಗಳಿವೆ. ನಾನೊಬ್ಬನೇ ಮದಕರಿ ನಾಯಕನ ಪಾತ್ರ ನಿರ್ವಹಿಸಬೇಕು ಎಂಬುದು ಎಷ್ಟು ಸರಿ? ಆತ ಕರ್ನಾಟಕದ ವೀರಪುತ್ರ. ಅವರ ಬಗ್ಗೆ ಸಿನಿಮಾ ಯಾರಾದರೂ ಮಾಡಬಹುದು.

darshan sudeep

ರಾಕ್‍ಲೈನ್ ವೆಂಕಟೇಶ್ ಅವರ ಸಿನಿಮಾ ಆಸಕ್ತಿ ಅದ್ವಿತೀಯವಾದದ್ದು. ಇದನ್ನೊಂದು ಅತ್ಯುತ್ತಮ ಚಿತ್ರವಾಗಿ ತೆರೆಯ ಮೇಲೆ ತರುತ್ತಾರೆ ಎಂಬುದಕ್ಕೆ ಅನುಮಾನವೇ ಇಲ್ಲ. ರಾಜೇಂದ್ರ ಸಿಂಗ್ ಬಾಬು ಅವರ ಅನುಭವ ಕೂಡ ಇದರಲ್ಲಿ ಸಮ್ಮಿಲನವಾಗಿದೆ.

ಆದರೆ ನಾನು ಮತ್ತು ನನ್ನ ತಂಡವು ಮಾಡ ಹೊರಟಿರುವ ಚಿತ್ರಕ್ಕೆ ಇದು ಅಡ್ಡಿಯಾಗುವುದಿಲ್ಲ. ಇದು ನಮ್ಮ ಕನಸೂ ಕೂಡ. ಇದು ಬರೀ ನನ್ನೊಬ್ಬನ ಕನಸಲ್ಲ. ಇಡೀ ತಂಡದ ಕನಸನ್ನು ನಾನು ಭಗ್ನಗೊಳಿಸಲು ಇಚ್ಛಿಸುವುದಿಲ್ಲ. ಇದರ ಬದಲಿಗೆ ಮಾಡಿ ಮಡಿಯುವುದೇ ಮೇಲು. ನಾನೂ ಒಬ್ಬ ಮದಕರಿ!

ರಾಕ್‍ಲೈನ್ ಅವರ ತಂಡವನ್ನು ನಾನು ಇಂತಹ ಒಳ್ಳೆಯ ಕರ್ನಾಟಕದ ನೆಲದ ಕಥೆಯನ್ನು ಆಯ್ಕೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಅವರಿಗೆ ನನ್ನ ಶುಭಾಶಯಗಳು. ಅದೇ ರೀತಿಯಾಗಿ ನನ್ನ ನಿರ್ಣಯವನ್ನು ನೀವೆಲ್ಲರೂ ಸಮ್ಮತಿಸುತ್ತೀರೆಂದು ನಂಬಿರುವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *