ಸ್ಯಾಂಡಲ್ ವುಡ್ ಹೆಸರಾಂತ ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ನಿನ್ನೆ ತಮ್ಮ ಹುಟ್ಟು ಹಬ್ಬವನ್ನು (Birthday) ನೆಲಮಂಗಲದ ಬಸವೇಶ್ವರ ಕಾಲೇಜಿನಲ್ಲಿ ಆಚರಿಸಿಕೊಂಡರು. ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರತಂಡದ ನಿರ್ದೇಶಕ ಶಶಾಂಕ್ (Shashank), ನಾಯಕಿ ಬೃಂದಾ ಆಚಾರ್ಯ, ಮಿಲನ ನಾಗರಾಜ್ (Milana Nagaraj) ಮತ್ತು ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಭಾಗವಹಿಸಿದ್ದರು.
ಡಾರ್ಲಿಂಗ್ ಕೃಷ್ಣ (Darling Krishna) ಅವರ ಹುಟ್ಟು ಹಬ್ಬಕ್ಕಾಗಿ ಅವರ ಮತ್ತೊಂದು ನಟನೆಯ ಸಿನಿಮಾ ‘ಶುಗರ್ ಫ್ಯಾಕ್ಟರಿ’ (Sugar Factory) ಚಿತ್ರತಂಡ ವಿಶೇಷ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ. ಈ ಮೂಲಕ ತನ್ನ ಚಿತ್ರದ ನಾಯಕನಿಗೆ ಚಿತ್ರತಂಡ ಶುಭಾಶಯ ತಿಳಿಸಿದೆ. ಇದನ್ನೂ ಓದಿ:ಬಾಲಿವುಡ್ ಚಿತ್ರಗಳ ಫ್ಲಾಪ್ ಬಳಿಕ ರಶ್ಮಿಕಾ ನಟನೆ 3ನೇ ಚಿತ್ರದ ಟೀಸರ್ ರಿಲೀಸ್
ದೀಪಕ್ ಅರಸ್ (Deepak) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಟಿ ಅಮೂಲ್ಯ ಸಹೋದರರಾಗಿರುವ ದೀಪಕ್ ಅರಸ್ ಈ ಹಿಂದೆ ಅಮೂಲ್ಯ, ರಾಕೇಶ್ ಅಡಿಗ ಜೋಡಿಯ ಮನಸಾಲಜಿ ಚಿತ್ರ ನಿರ್ದೇಶಿಸಿದ್ದರು, ಇದೀಗ ಎರಡನೇ ಸಿನಿಮಾವಾಗಿ ಶುಗರ್ ಫ್ಯಾಕ್ಟರಿ ಚಿತ್ರ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನ ದೀಪಕ್ ಅರಸ್ ಅವರೇ ಬರೆದಿದ್ದಾರೆ.
ಫನ್ ರೋಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅದ್ವಿತಿ ಶೆಟ್ಟಿ, ಸೊನಾಲ್ ಮೊಂಥೆರೋ, ಶಿಲ್ಪಾ ಶೆಟ್ಟಿ ಶುಗರ್ ಫ್ಯಾಕ್ಟರಿ ನಟಿಮಣಿಯರಾಗಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಅರಸು ಅಂತಾರೆ, ಚಂದನ್ ಶೆಟ್ಟಿ ಸಾಹಿತ್ಯ ಬರೆಯುತ್ತಿದ್ದಾರೆ. ಕಬೀರ್ ರಫಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣದಲ್ಲಿ ಶುಗರ್ ಫ್ಯಾಕ್ಟರಿ ಚಿತ್ರ ಸೆರೆಯಾಗಿದೆ.