ಯೂಟ್ಯೂಬರ್ ಡಾ ಬ್ರೊ (Dr Bro) ಅಭಿಮಾನಿಗಳಿಗೆ ಇದು ನಿಜಕ್ಕೂ ಸಿಹಿಸುದ್ದಿ. ಕನ್ನಡದ ಫೇಮಸ್ ಯೂಟ್ಯೂಬರ್ ಇದೀಗ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ಬದಲಿಗೆ, ಹೊಸ ತಂಡವೊಂದರ ಸಿನಿಮಾಗೆ ಹಿನ್ನೆಲೆ ಧ್ವನಿ ನೀಡಿ ಸಾಥ್ ನೀಡಿದ್ದಾರೆ.
ಪೂರ್ಣಚಂದ್ರ ತೇಜಸ್ವಿ (Poornachandra Tejasvi) ಅವರ ‘ಡೇರ್ ಡೆವಿಲ್ ಮುಸ್ತಾಫಾ’ (Daredevil Musthafa) ಕತೆಯನ್ನು ಅದೇ ಹೆಸರಿನಲ್ಲಿ ಸಿನಿಮಾ ತೆರೆಯ ಮೇಲೆ ತರಲಾಗುತ್ತಿದ್ದು, ಹೊಸಬರೇ ಮಾಡಿರುವ ಈ ಪ್ರಯತ್ನಕ್ಕೆ ಡಾ ಬ್ರೋ ಬೆಂಬಲ ನೀಡಿದ್ದಾರೆ. ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡಲಾಗುತ್ತಿದೆ.ಸದ್ಯ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಟ್ರೈಲರ್‌ನಲ್ಲಿ ಪಾತ್ರಗಳ ಪರಿಚಯ, ಸ್ಥಳದ ಪರಿಚಯ ಹಾಗೂ ಕತೆ ಬಗ್ಗೆ ಡಾ ಬ್ರೋ ಹಿನ್ನೆಲೆ ಧ್ವನಿ ನೀಡಿದ್ದಾರೆ. ಮೂರು ನಿಮಿಷದ ಟ್ರೈಲರ್‌ನಲ್ಲಿ ಹಲವು ಭಾರಿ ಡಾ ಬ್ರೋ ಧ್ವನಿ ಕೇಳಿ ಬರುತ್ತದೆ.
‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾದ ಟ್ರೈಲರ್ ಎಲ್ಲರ ಗಮನ ಸೆಳೆಯುತ್ತಿದೆ. ರೆಟ್ರೊ ಮಾದರಿಯ ಕತೆಯನ್ನು ಆಹ್ಲಾದಕರ ರೀತಿಯಲ್ಲಿ ತೆರೆಗೆ ತಂದಿರುವ ಕುರುಹು ಟ್ರೈಲರ್‌ನಲ್ಲಿ ಎದ್ದು ಕಾಣುತ್ತದೆ. ಈ ತಂಡ ಪೂರ್ಣಚಂದ್ರ ತೇಜಸ್ವಿಯವರ ಡೇರ್ ಡೆವಿಲ್ ಮುಸ್ತಾಫಾ ಕತೆಯನ್ನು ಆಧುನಿಕ ಸಿನಿಮಾ ವ್ಯಾಕರಣಕ್ಕೆ ಒಗ್ಗುವಂತೆ ಕಮರ್ಷಿಯಲ್ ಮಾದರಿಯಲ್ಲಿಯೇ ಸೊಗಸಾಗಿ ನಿರ್ದೇಶಕ ಶಶಾಂಕ್ ಸೋಗಲ್ (Director Shashank Sogal) ಕಟ್ಟಿದ್ದಾರೆ. ಇದನ್ನೂ ಓದಿ:ಹೊಸ ಪ್ರಾಜೆಕ್ಟ್‌ನಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ ಸಮಂತಾ- ಅನುಷ್ಕಾ ಶರ್ಮಾ
ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ‘ಡೇರ್ ಡೆವಿಲ್ ಮುಸ್ತಾಫಾ’ ನಿರ್ಮಾಣವಾಗಿದೆ. ಕನ್ನಡ ಚಿತ್ರರಸಿಕರನ್ನು ಬೇರೇ ಪ್ರಪಂಚಕ್ಕೆ ಕರೆದುಕೊಂಡು ಹೋಗಲು ಹೊಸ ಉತ್ಸಾಹಿ ಯುವಕರೇ ಕೂಡಿರುವ ಇಡೀ ಚಿತ್ರ ತಂಡ ಅತ್ಯಂತ ಫ್ಯಾಷನೆಟೇಡ್ ಆಗಿ ಕೆಲಸ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.