ಬಿಜೆಪಿಗೆ ದಲಿತರು ಅಭಿವೃದ್ಧಿ, ಆಡಳಿತದ ಪಾಲುದಾರರು- ಸಿ.ಟಿ.ರವಿ

Public TV
3 Min Read
ct ravi bjp

ಬೆಂಗಳೂರು: ದಲಿತರು ನಮಗೆ ಕೇವಲ ಮತಬ್ಯಾಂಕ್ ಅಲ್ಲ. ಅವರು ದೇಶದ ಅಭಿವೃದ್ಧಿಯ ಮತ್ತು ಆಡಳಿತದ ಪಾಲುದಾರರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ಹೇಳಿದ್ದಾರೆ.

ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ನಲ್ಲಿ ಇಂದು ರಾಷ್ಟ್ರೀಯ ಮತ್ತು ರಾಜ್ಯ ಎಸ್ ಸಿ ಮೋರ್ಚಾ ಪ್ರಮುಖರ ಜೊತೆ ಸಂವಾದ ನಡೆಸಿದ ಅವರು, ಪ್ರತಿಯೊಬ್ಬರೂ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕಬೇಕೆಂಬ ಆಶಯ ಬಿಜೆಪಿಯದು. ಇದಕ್ಕಾಗಿಯೇ ಬಿಜೆಪಿಯು ಅಂಬೇಡ್ಕರರ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದೆ ಎಂದು ವಿವರಿಸಿದರು. ಮೊದಲನೇ ಭಾರತರತ್ನ ಪ್ರಶಸ್ತಿಯೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಿಗಬೇಕಿತ್ತು. ಇತಿಹಾಸದಲ್ಲಿ ಕೊಡಬೇಕಾದ ನ್ಯಾಯವನ್ನು ಕಾಂಗ್ರೆಸ್ ಪಕ್ಷ ಅವರಿಗೆ ನೀಡಲಿಲ್ಲ ಎಂದು ಅವರು ಆಕ್ಷೇಪಿಸಿದರು.

ನವೆಂಬರ್ 26 ಸಂವಿಧಾನ ದಿನ. ಸಂವಿಧಾನ ಎಂದರೆ ಡಾ. ಅಂಬೇಡ್ಕರರ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅದನ್ನು ಮರೆಮಾಚುವ ಕೆಲಸ ಮಾಡಲಾಯಿತು. ನವೆಂಬರ್ 26 ಅನ್ನು ತೆರೆಗೆ ಸರಿಸುವ ಕೆಲಸ ನಡೆದಿತ್ತು. ಅಂಬೇಡ್ಕರ್ ಅವರನ್ನು ಸೋಲಿಸಿದ ಕಜ್ರೋಳ್ಕರ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಕೊಡಲಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ದಿಲ್ಲಿಯಲ್ಲಿ ಕಳೆದ 1 ವರ್ಷದಿಂದ ನಡೆಯುತ್ತಿದ್ದ ರೈತರ ಪ್ರತಿಭಟನೆ ವಾಪಸ್‌?

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರಕಾರವು ಡಾ. ಅಂಬೇಡ್ಕರ್ ಅವರ ಪಂಚಧಾಮಗಳನ್ನು ಪಂಚ ತೀರ್ಥ ಎಂದು ಘೋಷಿಸಿ ಅಭಿವೃದ್ಧಿ ಪಡಿಸಿದೆ. ಅವರು ಹುಟ್ಟಿದ ಜಾಗ ಮಧ್ಯಪ್ರದೇಶದ ಮಹುವಾ, ಬ್ಯಾರಿಸ್ಟರ್ ಪದವಿ ಪಡೆಯುವ ವೇಳೆ ವಾಸವಿದ್ದ ಲಂಡನ್‍ನ ಮನೆಯನ್ನು ಗುರುತಿಸಿ ಖರೀದಿಸಿ ಸ್ಮಾರಕವಾಗಿ ಪರಿವರ್ತನೆ, ದೆಹಲಿಯ ಆಲಿಪುರ್ ರಸ್ತೆಯಲ್ಲಿ ಅವರು ಸಂವಿಧಾನ ಕರ್ತೃವಾಗಿ ವಾಸವಿದ್ದ ಮನೆಯಲ್ಲಿ ಸ್ಮಾರಕ, ಕರ್ಮಭೂಮಿ ನಾಗಪುರ ಮತ್ತು ಅಂತ್ಯಸಂಸ್ಕಾರ ನಡೆದ ಮುಂಬೈ- ಈ ಪಂಚಸ್ಥಳಗಳನ್ನು ಪಂಚಧಾಮವಾಗಿ ಅಭಿವೃದ್ಧಿಪಡಿಸುವ ಕೆಲಸವನ್ನು ಮೋದಿಯವರ ನೇತೃತ್ವದಲ್ಲಿ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದ ಅರ್ಹ ವ್ಯಕ್ತಿಗಳಿಗೆ ನ್ಯಾಯ ಕೊಡುವ ಕೆಲಸವನ್ನೂ ಮಾಡಲಾಗಿದೆ ಎಂದು ಹೇಳಿದರು.

ಒಂದು ಕುಟುಂಬದ ಹಿತಾಸಕ್ತಿಗಾಗಿ ನೇತಾಜಿಗೆ ಅನ್ಯಾಯ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ನೇತಾಜಿ ಅವರಿಗೆ ನ್ಯಾಯ ಕೊಡುವ ಕೆಲಸ ನಡೆದಿದೆ. ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಮರೆಗೆ ಸರಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದ್ದು, ಅವರಿಗೆ ಗೌರವ ಕೊಡಲು ಏಕತಾ ಪ್ರತಿಮೆ ಸ್ಥಾಪಿಸಲಾಗಿದೆ. ಸಂವಿಧಾನ ದಿವಸ್ ಆಚರಣೆ, ಪಂಚತೀರ್ಥಗಳ ಅಭಿವೃದ್ಧಿ ಮೂಲಕ ಡಾ. ಅಂಬೇಡ್ಕರರಿಗೆ ಗೌರವ ಸಮರ್ಪಿಸುವ ಕಾರ್ಯ ನಡೆದಿದೆ. ಬಿಜೆಪಿ ಕಾರ್ಯಕರ್ತರು ತಮ್ಮ ಹೃದಯದಲ್ಲಿ ಅಂಬೇಡ್ಕರರನ್ನು ಇಟ್ಟುಕೊಂಡು ಗೌರವಿಸುವ ಕೆಲಸ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಕೆಂಪು ಟೋಪಿ ಧರಿಸಿದವರು ಉತ್ತರಪ್ರದೇಶಕ್ಕೆ ಅಪಾಯಕಾರಿ: ಮೋದಿ

SIDDARAMAIAH 3

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದವರು ರಾಜಕಾರಣದಲ್ಲಿರುವ ದಲಿತರನ್ನು ಹೊಟ್ಟೆಪಾಡಿಗಾಗಿ ರಾಜಕೀಯದಲ್ಲಿದ್ದಾರೆ ಎನ್ನುವ ಮಾತೇ ಅವರ ಮನಸ್ಸಿನಲ್ಲಿರುವ ದಲಿತ ವಿರೋಧಿ ಭಾವನೆಗೆ ಸಾಕ್ಷಿಯಾಗಿದೆ. ಬಡವರಿಗೆ ಬಲ ತುಂಬಬೇಕು, ದಲಿತರಿಗೆ ಬಲ ಕೊಡಬೇಕೆಂಬ ಡಾ. ಅಂಬೇಡ್ಕರರ ಕನಸನ್ನು ನನಸು ಮಾಡಲು ಪ್ರಧಾನಿ ಮೋದಿಯವರ ಜನಧನ್, ಆಯುಷ್ಮಾನ್‌ ಭಾರತ, ಸ್ಟಾರ್ಟಪ್, ಮುದ್ರಾ ಸೇರಿದಂತೆ ಪ್ರತಿಯೊಂದು ಯೋಜನೆಗಳು ನನಸು ಮಾಡುತ್ತಿವೆ ಎಂದು ವಿಶ್ಲೇಷಿಸಿದರು.

ನಾವು ಪ್ರತಿಯೊಬ್ಬರನ್ನೂ ಸ್ವಾವಲಂಬಿಯನ್ನಾಗಿ ಮಾಡಿ ಅವರ ಸಾಮರ್ಥ್ಯದ ಕ್ಷಮತೆಯನ್ನು ಹೆಚ್ಚು ಮಾಡಿ ಜನನಾಯಕರಾಗಿ ರೂಪುಗೊಳ್ಳುವಂತೆ ಬೆಳೆಸುತ್ತೇವೆ. ರಾಜಕೀಯ ಅಧಿಕಾರ ಅಂದರೆ ವಂಶಪಾರಂಪರ್ಯದ ಆಡಳಿತ ಅಲ್ಲ. ರಾಜಕೀಯ ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂಬುದೇ ಬಿಜೆಪಿ ಗುರಿಯಾಗಿದೆ. ಆದರೆ, ದುರ್ದೈವದ ಸಂಗತಿ ಎಂದರೆ ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ವಂಶಪಾರಂಪರ್ಯದ ಆಡಳಿತವನ್ನಾಗಿ ಪರಿವರ್ತಿಸಿದ ಕುಖ್ಯಾತಿ ಕಾಂಗ್ರೆಸ್‍ಗೆ ಸೇರುತ್ತದೆ ಎಂದು ವಿವರಿಸಿದರು.

CONGRESS 3

ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸಿ.ಟಿ. ರವಿ ಅವರು ರಾಷ್ಟ್ರೀಯ ಎಸ್‍ಸಿ ಮೋರ್ಚಾದ ಪ್ರಭಾರಿಗಳೂ ಆಗಿದ್ದಾರೆ. ಅವರ ನೇತೃತ್ವದಲ್ಲಿ ಇಡೀ ರಾಷ್ಟ್ರದಲ್ಲಿ ಪರಿಶಿಷ್ಟ ಜಾತಿಗಳು ಒಗ್ಗೂಡುವ ಮತ್ತು ಬಲಿಷ್ಠವಾಗಿ ಬಿಜೆಪಿಯನ್ನು ಕಟ್ಟುವ ಕೆಲಸದಲ್ಲಿ ಎಲ್ಲರೂ ಮುಂದಾಗಿದ್ದೇವೆ ಎಂದರು.

ಕರ್ನಾಟಕದಲ್ಲಿ ಎಸ್‍ಸಿ ಮೋರ್ಚಾವು ತನ್ನ ಸಂಘಟನೆಯನ್ನು ಗಟ್ಟಿಗೊಳಿಸಿದೆ. ಕಾಂಗ್ರೆಸ್ ಪಕ್ಷವು ದಲಿತರನ್ನು ದಾರಿ ತಪ್ಪಿಸುವ ಕೆಲಸ ಮಾಡಿತ್ತು. ಅವರನ್ನು ಮತಬ್ಯಾಂಕ್ ಮಾಡಿಕೊಂಡು, ಅವರನ್ನು ಜೀತದಾಳುಗಳಂತೆ ನಡೆಸಿಕೊಂಡಿತ್ತು ಎಂದು ಅವರು ಆಕ್ಷೇಪಿಸಿದರು. ಬಿಜೆಪಿ ದಲಿತ ವಿರೋಧಿ, ಸಂವಿಧಾನ ವಿರೋಧಿ, ಅಂಬೇಡ್ಕರರ ವಿರೋಧಿ ಎಂದು ಕಾಂಗ್ರೆಸ್ ಹೇಳುತ್ತಿತ್ತು. ವಿದ್ಯಾವಂತರಾದ ದಲಿತರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯದ ಅರಿವಾಗಿದೆ. ಇದರ ಪರಿಣಾಮದಿಂದ ದಲಿತರು ತಮ್ಮ ದಾರಿಯನ್ನು ಬದಲಿಸಿಕೊಂಡಿದ್ದಾರೆ. ಇವತ್ತು ನಮ್ಮ ಜನಾಂಗಗಳು ಬಿಜೆಪಿ ಪರವಾಗಿ ನಿಂತಿವೆ ಎಂದು ತಿಳಿಸಿದರು. ಎಸ್‍ಸಿ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿಗಳಾದ ಎಂ. ಕುಮಾರ್, ಪದಾಧಿಕಾರಿಗಳು, ಮುಖಂಡರು ಸಂವಾದದಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *