ಡಾಲಿ ಧನಂಜಯ ನಟನೆಯ ಕೋಟಿ ಸಿನಿಮಾದ ‘ಮನ ಮನ’ (Mana Mana Song) ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ. ಥ್ರಿಲ್ಲರ್ ಡ್ರಾಮಾ ಜಾನರ್‌ನ ಈ ಸಿನಿಮಾದಲ್ಲಿ ಡಾಲಿ ‘ಕೋಟಿ’ (Kotee) ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ ಹೊಂದಿರುವ ಪಾತ್ರವಾಗಿದೆ. ಈ ಥ್ರಿಲ್ಲರ್ ಸಿನಿಮಾದಲ್ಲಿ ಒಂದು ಪುಟ್ಟ ಲವ್ ಸ್ಟೋರಿ ಕೂಡ ಇದೆ.
‘ಮನ ಮನ’ ಹಾಡಿನ ಲಿರಿಕಲ್ ವಿಡಿಯೋದಲ್ಲಿ ಬರುವ ವಿಡಿಯೋ ತುಣುಕು ಇನ್ಸ್ಟಾಗ್ರಾಂ ರೀಲ್, ವಾಟ್ಸಾಪ್ ಸ್ಟೋರಿಯಾಗಿ ಎಲ್ಲೆಡೆ ಓಡಾಡ್ತಾ ಇದೆ. ಇಬ್ಬರ ನಡುವೆ ಪ್ರೀತಿ ಅರಳಿ ನಿಂತಾಗ ಬಹುವಚನದಿಂದ ಏಕವಚನಕ್ಕೆ ಬರುವ ಒಂದು ಸಂದರ್ಭ ಬಂದೇ ಬರುತ್ತದೆ. ‘ನೀವು’ ಅಂತ ಕರೆಯುತ್ತಿದ್ದವರು ‘ನೀನು’ ಅಂತ ಕರೆಯುವ ಸಮಯವದು. ಕೋಟಿಯ ಲೈಫಲ್ಲಿ ಬಂದ ಆ ಸಮಯ ಈ ವಿಡಿಯೋದಲ್ಲಿದೆ. ಎಲ್ಲರ ಲೈಫಲ್ಲೂ ಆಗಿರಬಹುದಾದ ಈ ಸಣ್ಣ ಕ್ಯೂಟ್ ಘಟನೆ ಈ ಹಾಡಿನಲ್ಲಿ ತೋರಿಸಲಾಗಿದ್ದು, ಎಲ್ಲರಿಗೂ ಕನೆಕ್ಟ್ ಆಗುತ್ತಿದೆ.
ನಿರ್ದೇಶಕರಾದ ಪರಮ್ ಅವರು ಹುಡುಗಿಯೊಬ್ಬಳು ನೀವು ಅಂತ ಕರೆಯಬೇಡ ಅಂತ ತಾಕೀತು ಮಾಡಿದಾಗ ಸಾಮಾನ್ಯ ಹುಡುಗನೊಬ್ಬ ಎದುರಿಸಬಹುದಾದ ಸಂಕೋಚವನ್ನು ಧನಂಜಯ ಅಭಿನಯಿಸಿರುವ ರೀತಿ ನಿಮಗೆ ಇಷ್ಟ ಆಗಬಹುದು ಎಂದು ಹೇಳಿದರು. ಇದನ್ನೂ ಓದಿ:ಹಾಟ್ ಆದ ಮೃಣಾಲ್- ನಟಿಯ ಮೈಮಾಟಕ್ಕೆ ಪಡ್ಡೆಹುಡುಗರು ಫಿದಾ
ಕೋಟಿ ಸಿನಿಮಾದ ಬುಕಿಂಗ್ಸ್ ಈಗ ಓಪನ್ ಆಗಿದೆ. ಜೂನ್ 12ರ ಸಂಜೆ ಟಿವಿ ಮತ್ತು ಸಿನಿಮಾ ತಾರೆಗಳಿಗೆ ಪ್ರೀಮಿಯರ್ ಶೋ ನಡೆಯಲಿದೆ. ಅದರ ಜೊತೆ ಸಾರ್ವಜನಿಕರಿಗಾಗಿ ಎರಡು ಪೇಯ್ಡ್ ಪ್ರೀಮಿಯರ್ ಶೋಗಳಿವೆ. ಜೂನ್ 13ರಂದು ಮೈಸೂರಿನಲ್ಲೂ ಪೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿದ್ದು, ಡಾಲಿ ಮತ್ತು ಸಿನಿಮಾತಂಡ ಮೈಸೂರಿನ ಸಿನಿಪ್ರೇಮಿಗಳ ಜೊತೆ ‘ಕೋಟಿ’ ಸಿನಿಮಾ ನೋಡಲಿದೆ. ಜೂನ್ 14ರಂದು ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೋಟಿ’ ಬಿಡುಗಡೆಯಾಗಲಿದೆ. ನಂತರದ ದಿನಗಳಲ್ಲಿ ಅಮೇರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಲಿದೆ.
View this post on Instagram
ಸಾಕಷ್ಟು ಸದ್ದು ಮಾಡುತ್ತಿರುವ ಅಪ್ಪಟ ಕನ್ನಡ ಮಣ್ಣಿನ ಕತೆಯಾದ ‘ಕೋಟಿ’ ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಸೋತಿರುವ ಕನ್ನಡ ಇಂಡಸ್ಟ್ರಿಗೆ ಗೆಲ್ಲುವ ಭರವಸೆಯಾಗಿ ಕಂಡಿದೆ. ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ.
ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. `ಕೋಟಿ’ ಜೂನ್ 14ರ ಶುಕ್ರವಾರ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.