ಬೆಂಗಳೂರು: 20 ಪರ್ಸೆಂಟ್ ವೋಟ್ ಬ್ಯಾಂಕ್ ಗಾಗಿ ಸಿಎಂ ಸಿದ್ದರಾಮಯ್ಯ ಅವರ ಅಲ್ಪಸಂಖ್ಯಾತರ ಮೇಲಿನ ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರ ರಾಜ್ಯಕ್ಕೆ ಒಳ್ಳೆಯದಲ್ಲ, ಈ ಕ್ರಮ ರಾಜ್ಯದ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿವಿ ಸದಾನಂದ ಗೌಡ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ಕೇಸ್‍ಗಳನ್ನ ವಾಪಸ್ ಪಡೆಯುವಂತೆ ಐಜಿಪಿಗೆ ಪತ್ರ ಬರೆದಿರುವ ಕ್ರಮವನ್ನು ಖಂಡಿಸಿದರು. ತುಷ್ಟೀಕರಣದ ವಿಪರೀತ ಪ್ರವೃತ್ತಿಗೆ ಇದು ಸಾಕ್ಷಿಯಾಗಿದೆ. ಬಹು ಸಂಖ್ಯಾತರನ್ನು ಒಡೆದಾಳುವ ಪ್ರವೃತ್ತಿ ಇದಾಗಿದ್ದು, ವಿನಾಶಕಾಲೆ ವಿಪರೀತ ಬುದ್ಧಿ ಎನ್ನುವಂತಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಸಿಕ್ತು ಕ್ಲೀನ್‍ಚಿಟ್ ಭಾಗ್ಯ- ಸರ್ಕಾರದಿಂದಲೇ ಹಿಂದೂ-ಮುಸ್ಲಿಂ ಇಬ್ಭಾಗ ಕೆಲಸ
ಸಿಎಂ ಜಾತಿ ಜಾತಿಗಳ ಸಂಘರ್ಷವನ್ನು ಉಂಟು ಮಾಡಿದ್ದಾರೆ. ಸದಾಶಿವ ಆಯೋಗವನ್ನು ಒಂದು ದಳವಾಗಿ ಬಳಕೆ ಮಾಡಿದ್ದಾರೆ. ಈ ಮೂಲಕ ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಇದು ಭವಿಷ್ಯದ ಕುರಿತ ಒತ್ತಡ ವೇಳೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಫಲ ಎಂದರು.
ಇದೇ ವೇಳೆ ಅಮಿತ್ ಶಾ ಅನುದಾನದ ಲೆಕ್ಕ ಕೇಳಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ಬಳಕೆ ಮಾಡಿರುವ ಅನುದಾನ ಬಗ್ಗೆ ಶ್ವೇತಪತ್ರ ಹೊರಡಿಸಿ ಬೇಕು. ಈ ರೀತಿ ಕೇಳುವುದು ನಮ್ಮ ಹಕ್ಕು. ರಾಜ್ಯದ ಮಾನ ಮರ್ಯಾದೆ ದೇಶದಲ್ಲಿ ಹರಾಜು ಹಾಕಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಕ್ಲೀನ್ ಚಿಟ್ ಭಾಗ್ಯ- ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ ಕೊಟ್ಟಿದ್ದು ಹೀಗೆ