ಕೊಪ್ಪಳ: ಜಾರಿ ನಿರ್ದೇಶನಾಲಯ (ಇಡಿ) ತೆಕ್ಕೆಗೆ ಸಿಲುಕಿ ಜೈಲು ಪಾಲಾಗಿರುವ ಡಿಕೆಶಿ ಯಾವಾಗ ಬಿಡುಗಡೆ ಆಗುತ್ತಾರೆ ಅಥವಾ ಜೈಲಿನಲ್ಲಿಯೇ ಮುಂದುವರಿಯುತ್ತಾರಾ ಎನ್ನುವ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ. ಇದರ ಬೆನ್ನೆಲ್ಲೇ ಕೊಪ್ಪಳದ ಕೌಡೇಪೀರ್ ಲಾಲ್ ಸಾಬ್ ದೇವರ ವಿಸರ್ಜನೆ ವೇಳೆ ಕನಕಪುರ ಬಂಡೆಯ ಭವಿಷ್ಯ ನುಡಿದು ಡಿಕೆಶಿ ಅಭಿಮಾನಿಗಳಲ್ಲಿ ಕೊಂಚ ರಿಲ್ಯಾಕ್ಸ್ ತಂದಿದೆ.
ಕೊಪ್ಪಳದ ಕನಕಗಿರಿಯಲ್ಲಿ ಕಳೆದ ಎರಡು ದಿನದ ಹಿಂದೆ ಮೊಹರಂ ನಂತರದ ಕೌಡೇಪೀರ್ ದೇವರ ವಿಸರ್ಜನೆ ನಡೆದಿತ್ತು. ಈ ವೇಳೆ ಕನಕಗಿರಿಯ ಕೆಲವರು ಡಿಕೆ ಶಿವಕುಮಾರ್ ಬಿಡುಗಡೆ ಬಗ್ಗೆ ದೇವರು ಹೊತ್ತವರನ್ನು ಕೇಳಿದ್ದಾರೆ. ಇದಕ್ಕೆ ಕೊಂಚ ಯೋಚನೆ ಮಾಡಿದ ಲಾಲ್ ಸಾಬ್ ದೇವರು ಪಂದ್ರಾ-ಬಿಸ್ ದಿನ್ ಆಯಾ ಎಂದು ಹೇಳಿದೆ.
ದೇವರ ಹೇಳಿಕೆ ನೀಡುತ್ತಲೇ ದೇವರ ಸ್ಮರಣೆಯ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಕಳೆದ ವಾರವಷ್ಟೇ ಮಳೆಗಾಗಿ ಹಲಾಯಿ ದೇವರ ಮುಂದೆ ಧರಣಿ ಕುಳಿತು ಜಿಲ್ಲೆಯಲ್ಲಿ ಮಳೆಯಾಗುವುದರ ಬಗ್ಗೆ ಪ್ರಶ್ನೆ ಕೇಳಿದ್ದರು. ಅಂದು ಹಲಾಯಿ ದೇವರು ಹೇಳಿದಂತೆ ಒಂದೇ ವಾರದಲ್ಲಿ ಜಿಲ್ಲಾದ್ಯಂತ ಮಳೆ ಸುರಿದಿತ್ತು. ಹಲಾಯಿ ದೇವರ ಮೇಲೆ ಇಟ್ಟಿದ್ದ ನಂಬಿಕೆ ಯಶಸ್ವಿಯಾಗಿತ್ತು.
ಇದೀಗ ಅದೇ ನಂಬಿಕೆ ಮೇಲೆ ಕೆಲ ಮಂದಿ ಕೌಡೇಪೀರ್ ಬಳಿ ಡಿಕೆಶಿ ಬಿಡುಗಡೆ ಕುರಿತು ಪ್ರಶ್ನೆ ಕೇಳಿದ್ದಾರೆ. ಡಿಕೆಶಿ ಬಿಡುಗಡೆ ಕುರಿತು ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಕೌಡೇಪೀರ್ ಭವಿಷ್ಯ ಏನಾಗುತ್ತೆ ಎಂದು ಕಾದು ನೋಡಬೇಕಿದೆ.