ಬೆಂಗಳೂರು: ವಿಶ್ವಾಸಮತಯಾಚನೆ ಕುರಿತ ಚರ್ಚೆ ಇಂದು ವಿಧಾನ ಸಭೆಯ ಸದನದಲ್ಲಿ ಮೈತ್ರಿ ಸರ್ಕಾರ ಹಾಗೂ ಬಿಜೆಪಿ ನಾಯಕರ ನಡುವಿನ ವಾಕ್ ಸಮರಕ್ಕೆ ಕಾರಣವಾಗಿದ್ದು, ಈ ನಡುವೆ ಸಚಿವ ಡಿಕೆ ಶಿವಕುಮಾರ್ ಹಾಗೂ ಶಾಸಕ ಶ್ರೀರಾಮುಲು ನಡುವೆ ಕುತೂಹಲ ಮೂಡಿಸುವ ಮಾತುಕತೆ ನಡೆದಿದೆ.
ಸದನವನ್ನು ಮುಂದೂಡಿ ಸ್ಪೀಕರ್ ಅವರು ಮಧ್ಯಾಹ್ನ 3 ಗಂಟೆಗೆ ಸಮಯ ನಿಗದಿ ಮಾಡುತ್ತಿದಂತೆ ಎಲ್ಲ ನಾಯಕರು ಊಟಕ್ಕೆ ಹೊರ ನಡೆದಿದ್ದರು. ಆದರೆ ಬಿಜೆಪಿ ಶಾಸಕ ಶ್ರೀರಾಮುಲು ಅವರು ತಮ್ಮ ಸ್ಥಾನದಲ್ಲೇ ಕುಳಿತು ಚಿಂತನೆ ನಡೆಸಿದಂತೆ ಕಂಡು ಬಂದಿತ್ತು.
ಇತ್ತ ಸಚಿವ ಡಿಕೆ ಶಿವಕುಮಾರ್ ಹಾಗೂ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಅವರು ಚರ್ಚೆಯಲ್ಲಿ ತೊಡಗಿದ್ದರು. ಈ ಸಮಯದಲ್ಲಿ ಒಬ್ಬರೇ ಕುಳಿತ್ತಿದ್ದ ಶ್ರೀರಾಮುಲು ಅವರನ್ನು ನೋಡಿ ಸಿಎಂ, “ಅಲ್ಲಿ ಕುಳಿತು ಏನ್ ಯೋಚನೆ ಮಾಡ್ತಿದ್ದಿಯಾ ನಮ್ಮ ಬಳಿಗೆ ಬಾ” ಎಂದು ಕಿಚಾಯಿಸಿದ್ದರು.
ಈ ವೇಳೆ ಡಿಕೆಶಿ “ನಿನ್ನ ಡಿಸಿಎಂ ಮಾಡಲ್ಲ, ಬೇಕಿದ್ರೆ ಬೇರೆಯವರನ್ನ ಡಿಸಿಎಂ ಮಾಡ್ತಾರೆ, ಜಾರಕಿಹೊಳಿಯನ್ನ ಡಿಸಿಎಂ ಮಾಡ್ತಾರೆ” ಎಂದರು. ಡಿಕೆ ಶಿವಕುಮಾರ್ ಅವರ ಮಾತಿಗೆ ನಗುತ್ತಲೇ ಟಾಂಗ್ ಕೊಟ್ಟ ಶ್ರೀರಾಮುಲು, “ಡಿಸಿಎಂ ಅಲ್ಲ ಸಿಎಂ ಮಾಡ್ತೀನಿ ಅಂದ್ರು ಬರಲ್ಲ” ಎಂದರು. ಬಳಿಕ ಡಿಕೆ ಶಿವಕುಮಾರ್ ಶ್ರೀರಾಮುಲು ಬಳಿ ಬಂದು ನಾಲ್ಕೈದು ನಿಮಿಷ ಚರ್ಚೆ ನಡೆಸಿದರು.