ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಡಿಕೆಶಿಗೆ ಮಹತ್ವದ ಹುದ್ದೆ- ಹೈಕಮಾಂಡ್ ನೀಡುತ್ತಾ ಗಿಫ್ಟ್?

Public TV
2 Min Read
bly dkshi masterplan 3

ಬೆಂಗಳೂರು: ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡುತ್ತಿದ್ದಂತೆ ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಕೆಪಿಸಿಸಿ ಪಟ್ಟ ನೀಡುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

ಹೌದು. ಈ ಹಿಂದೆ ಸಿಬಿಐ ಬಂಧನಕ್ಕೆ ಒಳಗಾಗಿ ಬಿಡುಗಡೆಯಾದ ಅಮಿತ್ ಶಾ ನಂತರ ಪವರ್ ಫುಲ್ ಲೀಡರ್ ಆಗಿ ಬೆಳೆದಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಬಿಜೆಪಿ ರಾಷ್ಟ್ರ ಅಧ್ಯಕ್ಷರಾಗಿ ಈಗ ಕೇಂದ್ರ ಗೃಹ ಸಚಿವರಾಗಿದ್ದಾರೆ. ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾದ ನಂತರ ಅಮಿತ್ ಶಾಗೆ ಹೇಗೆ ಹೈಕಮಾಂಡ್ ಭರ್ಜರಿ ಗಿಫ್ಟ್ ನೀಡಿತ್ತೋ ಅದೇ ರೀತಿ ಡಿಕೆ ಶಿವಕುಮಾರ್ ಅವರಿಗೂ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಲಿದೆ ಎನ್ನುವ ವಿಚಾರ ಈಗಾಗಲೇ ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗುತ್ತಿದೆ.

Amit Shah

ಈಗ ದೇಶಾದ್ಯಂತ ಕಾಂಗ್ರೆಸ್ ಪ್ರಭಾವ ಕಡಿಮೆಯಾಗಿದೆ. ರಾಜ್ಯ ರಾಜಕಾರಣದಲ್ಲಿ ಪವರ್ ಫುಲ್ ಆಗಿರುವ ಡಿಕೆಶಿ ರಾಷ್ಟ್ರ ಮಟ್ಟದಲ್ಲೂ ತಮ್ಮದೇ ಆದ ಸಂಪರ್ಕ ಹೊಂದಿದ್ದಾರೆ. ಈಗಾಗಲೇ ಟ್ರಬಲ್ ಶೂಟರ್ ಎಂಬ ಖ್ಯಾತಿ ಪಡೆದಿರುವ ಡಿಕೆಶಿ ಬಂಧನದ ವಿಚಾರವೂ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದರಿಂದ ಕಾಂಗ್ರೆಸ್ ಶಿವಕುಮಾರ್ ವಿಷಯದಲ್ಲಿ ಗಂಭೀರವಾಗಿ ಯೋಚಿಸತೊಡಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಗುಜರಾತ್ ಶಾಸಕರನ್ನು ರೆಸಾರ್ಟಿನಲ್ಲಿ ರಕ್ಷಣೆ ಮಾಡಿದ್ದಕ್ಕೆ ಸೇಡಿನ ರಾಜಕಾರಣ ಮಾಡಿ ಬಂಧನ ಮಾಡಲಾಯಿತು. ಈ ವಿಚಾರವನ್ನು ಮುನ್ನಲೆಗೆ ತಂದು ರಾಜ್ಯಾಧ್ಯಕ್ಷ ಪಟ್ಟವನ್ನು ನೀಡಲು ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

ಇಂದು ಬೆಳಗ್ಗೆ ಡಿಕೆ ಶಿವಕುಕಮಾರ್ ಅವರನ್ನು ತಿಹಾರ್ ಜೈಲಿನಲ್ಲಿ ಸೋನಿಯಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಭೇಟಿ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸೋನಿಯಾ ಜೊತೆ ಆಗಮಿಸಿದ್ದರು.

ಸೋನಿಯಾ ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಡಿಕೆ ಸುರೇಶ್, ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ ಎಂದು ಅಣ್ಣನಲ್ಲಿ ಹೇಳಿ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ. ಸೋನಿಯಾಗಾಂಧಿ ಭೇಟಿ ಹಾಗೂ ಸಾಂತ್ವನದಿಂದ ಶಿವಕುಮಾರ್ ಅವರಲ್ಲಿಯೂ ಧೈರ್ಯ ಬಂದಿದೆ ಎಂದು ತಿಳಿಸಿದ್ದರು.

ಸಿಬಿಐ ಅರೆಸ್ಟ್ ಮಾಡುತ್ತಾ?
ಡಿ. ಕೆ. ಶಿವಕುಮಾರ್ ವಿರುದ್ಧ ಐಟಿ ದಾಳಿ ನಡೆದ ಬಳಿಕ ದೆಹಲಿಯಲ್ಲಿ ಸಿಕ್ಕಿದ ದಾಖಲೆ ರಹಿತ ಹಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿತ್ತು. ಅಕ್ರಮ ಹಣ ವರ್ಗಾವಣೆ ಕೇಸ್ ಅಡಿ ಬಂಧನಕ್ಕೆ ಒಳಗಾದ ಡಿಕೆಶಿ ತಿಹಾರ್ ಜೈಲು ಸೇರಿದ್ದರು. ಇದೇ ಐಟಿ ದಾಳಿಯ ಬಳಿಕ, ಡಿಕೆಶಿ ಅಕ್ರಮ ಆಸ್ತಿ ಹೊಂದಿದ್ದಾರೆ ಅನ್ನೋ ಆರೋಪದ ಮೇಲೆ ಸಿಬಿಐ ಭ್ರಷ್ಟಾಚಾರ ತಡೆ ಕಾಯ್ದೆ ಸಿಬಿಐ ಪ್ರಕರಣ ದಾಖಲಿಸಿದೆ. ಡಿಕೆಶಿ ವಿರುದ್ಧ ಪ್ರಕರಣ ದಾಖಲಿಸುವುದಕ್ಕೂ ಮುನ್ನ ರಾಜ್ಯ ಸರ್ಕಾರದಿಂದಲೂ ಸಿಬಿಐ ಅನುಮತಿ ಪಡೆದಿತ್ತು. ಡಿಕೆಶಿ ತಿಹಾರ್ ಜೈಲಿನಲ್ಲಿ ಇರುವಾಗಲೇ ಪ್ರಾಥಮಿಕ ತನಿಖೆಯನ್ನೂ ಆರಂಭಿಸಿದ್ದ ಸಿಬಿಐ, ಇದೀಗ ತಾನೇ ತನಿಖೆ ಪೂರ್ಣಗೊಳಿಸಿದೆ. ಹೀಗಾಗಿ ಎಫ್‍ಐಆರ್ ದಾಖಲಾದರೆ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ.

CBI

ಸಿಬಿಐ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಪಟ್ಟ ನೀಡುತ್ತಾ ಇಲ್ಲವೋ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *