ಕೊಪ್ಪಳ: ಫೆಂಗಲ್ ಚಂಡಮಾರುತದಿಂದ (Fengal Cyclone) ಜಿಲ್ಲೆಯಲ್ಲಿ ಕಳೆದೆರಡು ದಿನದಿಂದ ಮೋಡ ಕವಿದ ವಾತಾವರಣ ಮತ್ತು ಜಡಿಮಳೆ ಶುರುವಾಗಿದ್ದು, ರೈತರು ಕಂಗಾಲಾಗಿದ್ದಾರೆ.
ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬಹುತೇಕ ರೈತರು ಭತ್ತ ಕಟಾವು ಮಾಡಿದ್ದಾರೆ. ಮಳೆಯಾಶ್ರಿತ ಪ್ರದೇಶದಲ್ಲಿ ತೊಗರಿ, ಮೆಕ್ಕೆಜೋಳ ಸೇರಿ ನಾನಾ ಬೆಳೆಗಳು ಹಾನಿಯಾಗಿವೆ. ಮತ್ತೊಂದೆಡೆ ನಗರ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ಥವಾಗಿದೆ.ಇದನ್ನೂ ಓದಿ: ದರ್ಶನ್ ಸೂಚನೆ ಮೇರೆಗೆ ಕಿಡ್ನಾಪ್ – ಕೊಲೆಯಲ್ಲಿ ಪವಿತ್ರಾ ಪಾತ್ರವಿಲ್ಲ: ವಕೀಲರ ವಾದ
Advertisement
Advertisement
ಕೊಪ್ಪಳ ಜಿಲ್ಲೆಯಲ್ಲಿ ಭತ್ತ ಮತ್ತು ತೊಗರಿ ಕಟಾವು ಮಾಡಿದ ರೈತರು ಫಸಲು ಒಣಗಿಸಲು ಪರದಾಡುತ್ತಿದ್ದಾರೆ. ಕಟಾವು ಮಾಡದ ರೈತರು ಇನ್ನೊಂದು ರೀತಿಯಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಕಟಾವು ಮಾಡದ ಭತ್ತ ಗಾಳಿ ಸಹಿತ ಜಡಿಮಳೆಗೆ ನೆಲಕ್ಕೆ ಉರುಳಿದ್ದು, ಕಟಾವು ಮಾಡುವ ಯಂತ್ರಕ್ಕೆ ಹೆಚ್ಚುವರಿ ಹಣ ನೀಡಬೇಕಿದೆ. ಇನ್ನು ತೊಗರಿ ಬೆಳೆ ಮಳೆಯಿಂದ ನಿಂತಲ್ಲೇ ಮೊಳಕೆಯೊಡೆದು, ಫಸಲು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ.
Advertisement
Advertisement
ಭತ್ತ ನೀರು ಪಾಲು:
ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು ರಸ್ತೆಯಲ್ಲಿ ಭತ್ತ ಒಣಗಿಸುತ್ತಿದ್ದಾರೆ. ಮಳೆಯಿಂದ ರೈತರು ದೊಡ್ಡ ತಾಡಪಲ್ ಹಾಕಿ, ಭತ್ತ ಸುರಕ್ಷಿತವಾಗಿಡಲು ಹರಸಾಹಸ ಪಡುತ್ತಿದ್ದಾರೆ. ಆದಾಗ್ಯೂ ಭತ್ತ ಮಳೆಯಿಂದಾಗಿ ನೀರಿಗೆ ಕೊಚ್ಚಿ ಹೋಗಿದೆ. ಕೆಲಕಡೆ ಭತ್ತ ನೀರಿನಲ್ಲಿ ತೊಯ್ದಿದ್ದರಿಂದ ಮೊಳಕೆ ಒಡೆಯುವ ಸ್ಥಿತಿಯಲ್ಲಿದೆ.
ಗಂಗಾವತಿ, ಕಾರಟಗಿ ಮತ್ತು ಕೊಪ್ಪಳ ತಾಲೂಕಿನ ಹಿಟ್ನಾಳ್ ಸೇರಿ ನಾನಾ ಕಡೆ ಇಂತಹ ಸ್ಥಿತಿ ಸಹಜವಾಗಿದೆ. ಜಿಲ್ಲೆಯಲ್ಲಿ ಸುಮಾರು 69 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತ ಬೆಳೆದಿದ್ದು, ಬಹುತೇಕ ರೈತರಿಗೆ ಸಮಸ್ಯೆಯಾಗಿದೆ. ಈ ಬಾರಿ ನೀರಿನ ಸಮಸ್ಯೆ ಇಲ್ಲದ್ದರಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ಸೈಕ್ಲೋನ್ ಮತ್ತೊಂದು ಚಿಂತೆಗೆ ದೂಡಿದೆ. ರಸ್ತೆ ಮೇಲಿನ ನೀರು ಭತ್ತದ ರಾಶಿಗೆ ಹೋಗಿದ್ದರಿಂದ ಸಾಕಷ್ಟ ಭತ್ತ ಕೊಚ್ಚಿಕೊಂಡು ಹೋಗಿದೆ.
ಖುಷ್ಕಿ ಪ್ರದೇಶದಲ್ಲೂ ಹಾನಿ:
ಮೋಡ ಕವಿದ ವಾತಾವರಣ ಮತ್ತು ಜಡಿಮಳೆಯಿಂದ ಮಳೆಯಾಶ್ರಿತ ಪ್ರದೇಶದಲ್ಲೂ ಭಾರಿ ಪ್ರಮಾಣದಲ್ಲಿ ತೊಗರಿ ಬೆಳೆ ನಾಶವಾಗಿದೆ. ಒಟ್ಟಿನಲ್ಲಿ ಫೆಂಗಲ್ ಚಂಡಮಾರುತ ಕೊಪ್ಪಳ ಜಿಲ್ಲೆಯ ರೈತರಿಗೆ ದೊಡ್ಡ ಮಟ್ಟದ ಶಾಕ್ ನೀಡುತ್ತಿದೆ. ಇನ್ನೂ ಮಳೆ ಇದೇ ರೀತಿ ಮುಂದುವರಿದರೆ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕಿದೆ.ಇದನ್ನೂ ಓದಿ: ಯತ್ನಾಳ್ ಉಚ್ಛಾಟನೆಗೆ ಒಕ್ಕೊರಲ ಒತ್ತಾಯ – ಬಿಜೆಪಿ ಸರಣಿ ಸಭೆಯಲ್ಲಿ ಏನು ಚರ್ಚೆ ನಡೆದಿದೆ?