ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ಕರಾವಳಿ, ಗೋವಾ ಮತ್ತು ಮಹಾರಾಷ್ಟ್ರ ಭಾಗದಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದ್ದು, ಎಲ್ಲ ಬಂದರುಗಳಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.
ಅತ್ತ ಉತ್ತರ ಕರ್ನಾಟಕದ ಜನ ಮಳೆ, ಪ್ರವಾಹದಿಂದ ತತ್ತರಿಸಿರುವಾಗಲೇ ರಾಜ್ಯದ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಮಹಾರಾಷ್ಟ್ರದ ರತ್ನಗಿರಿಯಿಂದ 360 ಕಿಮೀ ದೂರದ ಅರಬ್ಬೀ ಸಮುದ್ರದ ಮಧ್ಯೆ ತೀವ್ರ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು, ಮಾರುತಗಳು ಸುಂಟರಗಾಳಿಯಾಗಿ ಮಾರ್ಪಡುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಈ ಮಾರುತಗಳು ದಕ್ಷಿಣದಿಂದ ಈಶಾನ್ಯ ಭಾಗ ಎಂದರೆ, ಕರ್ನಾಟಕದ ಕರಾವಳಿ ಮತ್ತು ಗೋವಾ ಭಾಗದತ್ತ ಬರುತ್ತಿದ್ದು, ತೀವ್ರ ಗಾಳಿ ಮತ್ತು ಮಳೆಯೊಂದಿಗೆ ಕರಾವಳಿಗೆ ಅಪ್ಪಳಿಸಲಿದೆ. ಮುಂದಿನ 24 ಗಂಟೆಗಳಲ್ಲಿ ಯಾವುದೇ ಕ್ಷಣದಲ್ಲಿ ಈ ಮಾರುತಗಳ ಹೊಡೆತ ಕರಾವಳಿಗೆ ತಟ್ಟಲಿದೆ ಎನ್ನುವ ಎಚ್ಚರಿಕೆ ನೀಡಲಾಗಿದೆ.
Advertisement
Advertisement
ಯಾವುದೇ ಕ್ಷಣದಲ್ಲಿ ಮಲಯ ಮಾರುತಗಳು ಸುಂಟರ ಗಾಳಿಯೊಂದಿಗೆ ಕರಾವಳಿ ಭಾಗಕ್ಕೆ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಎಲ್ಲ ಬಂದರುಗಳಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಜೊತೆಗೆ ಮೀನುಗಾರಿಕೆ ಮತ್ತು ಹಡಗುಗಳ ಸಂಚಾರವನ್ನೂ ನಿರ್ಬಂಧಿಸಲಾಗಿದೆ. ಜೊತೆಗೆ ಕಡಲಿನ ಅಲೆಗಳು 3ರಿಂದ 4 ಮೀಟರ್ ಎತ್ತರಕ್ಕೆ ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿದ್ದು, ಯಾರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕರ್ನಾಟಕ, ಗೋವಾ ಪ್ರದೇಶದಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಕಾಣಿಸಿಕೊಳ್ಳುವ ಬಗ್ಗೆಯೂ ಮುನ್ನೆಚ್ಚರಿಕೆ ನೀಡಲಾಗಿದೆ.
Advertisement
ಈಗಾಗಲೇ ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದ್ದು, ಮುಂದಿನ 24 ಗಂಟೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಆಯಾ ಭಾಗದ ಜಿಲ್ಲಾಡಳಿತಗಳು ತೀವ್ರ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಹವಾಮಾನ ಇಲಾಖೆ ಮತ್ತು ವಿಪತ್ತು ನಿರ್ವಹಣಾ ತಂಡವು ಸೂಚನೆ ನೀಡಿದೆ.