ಒಡಿಶಾ ತೀರಕ್ಕೆ ಅಪ್ಪಳಿಸಿದ ಡಾನಾ ಚಂಡಮಾರುತ – ಗಂಟೆಗೆ 120 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ

Public TV
2 Min Read
Cyclone Dana Makes Landfall With Heavy Rain Strong Winds In Odisha Bengal

ಭುವನೇಶ್ವರ/ಕೋಲ್ಕತ್ತಾ: ವಾಯುವ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಡಾನಾ ಚಂಡಮಾರುತ (Cyclone Dana) ನಿರೀಕ್ಷೆಯಂತೆ ಮಧ್ಯರಾತ್ರಿ ಒಡಿಶಾ ಕರಾವಳಿಗೆ (Odisha Coast) ಅಪ್ಪಳಿಸಿದೆ. ಕೇಂದ್ರಪಾರ ಜಿಲ್ಲೆಯ ಭಿತರ್ಕಾನಿಕಾ ಮತ್ತು ಭದ್ರಕ್‌ನ ಧಮ್ರಾ ನಡುವೆ ಅಪ್ಪಳಿಸಿ ಜೋರು ಮಳೆಯಾಗುತ್ತಿದೆ.

ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು ಒಡಿಶಾ, ಬಂಗಾಳದ ತೀರ ಪ್ರದೇಶಗಳಲ್ಲಿ (West Bengal) ಬಿರುಗಾಳಿಯೊಂದಿಗೆ ಭಾರೀ ಮಳೆಯಾಗುತ್ತಿದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಉತ್ತರ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ.

ನೆರೆಯ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಮತ್ತು ಕೋಲ್ಕತ್ತಾದಲ್ಲಿ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆ (Rain) ಸುರಿಯುತ್ತಿದೆ. ಇದನ್ನೂ ಓದಿ: ಮುಡಾ ಕೇಸ್; ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸಿಎಂ ಮೊರೆ

ಒಡಿಶಾದ ಕರಾವಳಿ ಜಿಲ್ಲೆಗಳಾದ ಭದ್ರಕ್, ಕೇಂದ್ರಪಾರ, ಬಾಲಸೋರ್ ಮತ್ತು ಸಮೀಪದ ಜಗತ್‌ಸಿಂಗ್‌ಪುರದಲ್ಲಿ ಗಂಟೆಗೆ 100 ರಿಂದ 120 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.


ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಗುರುವಾರ ಸಂಜೆಯಿಂದ ಸ್ಥಗಿತಗೊಂಡಿದ್ದ ಭುವನೇಶ್ವರದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸೇವೆಗಳು ಇಂದು ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಳ್ಳಲಿದೆ. ವಿಮಾನ ನಿಲ್ದಾಣವನ್ನು ಬಂದ್‌ ಮಾಡಿದ ಪರಿಣಾಮ ಸುಮಾರು 40 ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಮೇಲೆ ಪರಿಣಾಮ ಬೀರಿದೆ.

ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಭಾಗದಲ್ಲಿ ಸಂಚರಿಸುವ 400ಕ್ಕೂ ಹೆಚ್ಚು ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ. ಒಡಿಶಾದಲ್ಲಿ ಸುಮಾರು 6 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.

 

Share This Article