ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ವಹಿಸಿಕೊಳ್ಳುವಂತೆ ರಾಹುಲ್ ಗಾಂಧಿ (Rahul Gandhi) ಅವರಿಗೆ ಮನವಿ ಮಾಡುವ ನಿರ್ಣಯವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಅಂಗೀಕರಿಸಿದೆ ಎಂದು ಪಕ್ಷದ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ವಹಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿಗೆ CWC ಸದಸ್ಯರು ಸರ್ವಾನುಮತದಿಂದ ವಿನಂತಿಸಿದ್ದಾರೆ. ಸಂಸತ್ತಿನ ಒಳಗೆ ವಿಪಕ್ಷ ನಾಯಕ ಸ್ಥಾನಕ್ಕೆ ರಾಹುಲ್ ಅವರು ಅತ್ಯುತ್ತಮ ವ್ಯಕ್ತಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಪ್ರಮಾಣವಚನಕ್ಕೆ ವಿದೇಶಿ ಗಣ್ಯರು, ಪೌರಕಾರ್ಮಿಕರು- ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ?
ವಿಪಕ್ಷ ನಾಯಕ ಸ್ಥಾನ ವಹಿಸಿಕೊಳ್ಳಲು ರಾಹುಲ್ ಗಾಂಧಿ ಒಪ್ಪಿದ್ದಾರೆಯೇ ಎಂಬ ಪ್ರಶ್ನೆಗೆ, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.
ನಮ್ಮ ನಾಯಕರು ಮತ್ತು ಕಾರ್ಯಕರ್ತರು ಹುಮ್ಮಸ್ಸಿನಿಂದ ಕಾಂಗ್ರೆಸ್ ಪುನಶ್ಚೇತನ ಕೆಲಸ ಆರಂಭಿಸಿದ್ದಾರೆ. ಸಿಡಬ್ಲ್ಯುಸಿಯಲ್ಲಿನ ವಾತಾವರಣವು ನಾಲ್ಕು ತಿಂಗಳ ಹಿಂದೆ ಇದ್ದದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾವು ಶಿಸ್ತುಬದ್ಧವಾಗಿ, ಒಗ್ಗಟ್ಟಿನಿಂದ ಇರಬೇಕು- CWC ಸಭೆಯಲ್ಲಿ ಖರ್ಗೆ ಮಾತು
ರಾಹುಲ್ ಗಾಂಧಿಯೇ ವಿಪಕ್ಷ ನಾಯಕ ಆಗಬೇಕು ಎಂಬ ಆಗ್ರಹ ಕೇಳಿಬಂದಿದೆ. ರಾಹುಲ್ ಗಾಂಧಿ ಕಾರಣದಿಂದಲೇ ಹೆಚ್ಚು ಸ್ಥಾನ ಬಂದಿದೆ. ಭಾರತ್ ಜೋಡೋ ಯಾತ್ರೆ ನಡೆದಲ್ಲೆಲ್ಲ ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ. ಮಣಿಪುರದಲ್ಲೂ ಎರಡು ಸ್ಥಾನ ಗೆಲ್ಲಲು ರಾಹುಲ್ ಕಾರಣ. ಹೀಗಾಗಿ ರಾಹುಲ್ ಗಾಂಧಿಯೇ ವಿರೋಧ ಪಕ್ಷದ ನಾಯಕ ಆಗಬೇಕು ಎಂದು ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರು, ಸಿಡಬ್ಲ್ಯೂಸಿ ಸದಸ್ಯರು ಒತ್ತಾಯಿಸಿದ್ದಾರೆ.