ಬೆಂಗಳೂರು: ಮದರಂಗಿ ಖ್ಯಾತಿಯ ನಿರ್ದೇಶಕ ಮಲ್ಲಿಕಾರ್ಜುನ್ ಮುತ್ತಲಗೇರಿ ಸಾರಥ್ಯದಲ್ಲಿ ‘ರಂಗ್‍ಬಿರಂಗಿ’ ಸಿನಿಮಾ ಇದೇ ತಿಂಗಳು 23ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಹುಚ್ಚು ಕುದುರೆಯ ಬೆನ್ನೇರಿ ಎಂಬ ಅಡಿ ಬರಹವನ್ನು ಹೊಂದಿರುವ ರಂಗ್‍ಬಿರಂಗಿಯಲ್ಲಿ ಹೊಸ ಕಲಾವಿದರು ನಟಿಸಿದ್ದು, ಈಗಾಗಲೇ ಸಿನಿಮಾದ ಟ್ರೇಲರ್, ಇಂಪಾದ ಸಂಗೀತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಚಿತ್ರಕ್ಕಾಗಿ ನವಕಲಾವಿದರನ್ನು ಆಡಿಷನ್ ಮೂಲಕವೇ ಆಯ್ಕೆ ಮಾಡಿಕೊಂಡು, ಒಂದು ವರ್ಷದವರೆಗೆ ಕಲಾವಿದರೆಲ್ಲರಿಗೂ ತರಬೇತಿ ನೀಡಲಾಗಿದೆ. ಸತತ ಎರಡೂವರೆ ವರ್ಷಗಳ ಪರಿಶ್ರಮದಿಂದ ಸಿನಿಮಾ ಈಗ ತಯಾರಾಗಿದ್ದು ಹಿಂದೆಂದೂ ಕಾಣದ ವಿಭಿನ್ನ ಪ್ರೇಮಕಥೆಯ ರಂಗಬಿರಂಗಿ ಒಳಗೊಂಡಿದೆ. ನಟಿ ತನ್ವಿ ರಾವ್ ನಟರಾದ ಶ್ರೀಜಿತ್, ಪಂಚು, ಚರಣ್ ಮತ್ತು ಶ್ರೇಯಸ್ ನಾಲ್ವರು ಲೀಡ್ ರೋಲ್‍ನಲ್ಲಿ ನಟಿಸಿದ್ದಾರೆ ಎಂದು ಸಿನಿಮಾ ನಿರ್ದೇಶಕ ಮಲ್ಲಿಕಾರ್ಜುನ್ ಮುತ್ತಲಗೇರಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಸಿನಿಮಾ ಒಟ್ಟು ಐದು ಹಾಡುಗಳನ್ನು ಒಳಗೊಂಡಿದ್ದು, ಸನ್ನಿವೇಶಕ್ಕೆ ಅನುಗುಣವಾಗಿ ಹಾಡುಗಳು ಚಿತ್ರದಲ್ಲಿ ಬರಲಿವೆ. ಜಯಂತ್ ಕಾಯ್ಕಿಣಿ, ಮಾರುತಿ, ಮನೋಜ್ ಮತ್ತು ನಿರ್ದೇಶಕ ಮಲ್ಲಿಕಾರ್ಜುನ್ ಬರೆದಿರುವ ಹಾಡುಗಳಿಗೆ ಮಣಿಕಾಂತ್ ಸಂಗಿತಾ ನಿರ್ದೇಶಿಸಿದ್ದಾರೆ.
ಕುರಿ ಪ್ರತಾಪ್, ಪ್ರಶಾಂತ್ ಸಿದ್ಧಿ, ಬಾಬು ಹಿರಣಯ್ಯ, ರಾಕಲೈನ್ ಸುಧಾಕರ್, ಸವಿತಾ ಕೃಷ್ಣಮೂರ್ತಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಬೆಂಗಳೂರು ಸುತ್ತಲಿನ ಪ್ರದೇಶ, ಮಂಗಳೂರು ಮತ್ತು ಗೋವಾ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಡಿ. ಶಾಂತ್‍ಕುಮಾರ್ ರಂಗ್‍ಬಿರಂಗಿ ಗೆ ಬಂಡವಾಳ ಹಾಕಿದ್ದಾರೆ.