ಹಿರಿಯ ನಟಿ ಲೀಲಾವತಿ (Leelavathi) ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದೀಗ ಹಾಲಿ ಸಿಎಂ ಸಿದ್ದರಾಮಯ್ಯ(Siddaramaiah), ಮಾಜಿ ಸಿಎಂ ಯಡಿಯೂರಪ್ಪ (Yediyurappa) ಅವರು ಲೀಲಾವತಿ ಅಂತಿಮ ದರ್ಶನ ಪಡೆದಿದ್ದಾರೆ.
ನಿನ್ನೆ (ಡಿ.8) ಲೀಲಾವತಿ ನಿಧನದ ಸುದ್ದಿ ಕೇಳ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರು ಸಂತಾಪ ಸೂಚಿಸಿದ್ದರು. ಇಂದು (ಡಿ.9) ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ. ಈ ವೇಳೆ, ವಿನೋದ್ ರಾಜ್ ಭೇಟಿಯಾಗಿ ಸಿದ್ದರಾಮಯ್ಯ ಅವರು ಸಂತೈಸಿ ಧೈರ್ಯ ತುಂಬಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರು ಲೀಲಾವತಿ ಅಂತಿಮ ದರ್ಶನದ ಬಳಿಕ ವಿನೋದ್ ರಾಜ್‌ಗೆ ಸಾಂತ್ವನ ಹೇಳಿದ್ದಾರೆ.
ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಕಲಾವಿದರು, ಆಪ್ತರು, ಅಭಿಮಾನಿಗಳು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಸೋಲದೇವನಹಳ್ಳಿ ತೋಟದಲ್ಲಿ ಲೀಲಾವತಿ ಅವರ ಅಂತ್ಯ ಸಂಸ್ಕಾರ ಮಧ್ಯಾಹ್ನ 3:30ಕ್ಕೆ ನೆರವೇರಲಿದೆ. ಇದನ್ನೂ ಓದಿ:ಹಿರಿಯ ನಟಿ ಲೀಲಾವತಿ ನಿಧನಕ್ಕೆ ಪಿಎಂ ಮೋದಿ ಸಂತಾಪ
ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.