ಬೆಂಗಳೂರು/ತುಮಕೂರು: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಉರ್ಕೇಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಾಸಕ ಸಿಟಿ ರವಿ ಅವರ ಕಾರು ಅಪಘಾತಕ್ಕೀಡಾಗಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದು, ಈ ಕುರಿತು ಮೃತ ಗೆಳೆಯ ಚೇತನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಸಿ.ಟಿ ರವಿ ಕುಡಿದಿದ್ದರು ಎಂದು ಆರೋಪಿಸುತ್ತಾ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಕನಕಪುರ ತಾಲೂಕಿನ ಸೂರನಹಳ್ಳಿ ಗ್ರಾಮದಿಂದ ಕೊಲ್ಲೂರು, ಧರ್ಮಸ್ಥಳ ದೇವಾಲಯಗಳಿಗೆ ತೆರಳಿ ದರ್ಶನ ಮಾಡಿ ವಾಪಸ್ ಬರುತ್ತಿದ್ದೆವು. ಕುಣಿಗಲ್ ಸಮೀಪ ಒಂದು ಸೇತುವೆ ಇದೆ. ಅದರ ಎಡಬದಿಗೆ ನಾವು ಕಾರು ಪಾರ್ಕ್ ಮಾಡಿದ್ದೆವು. ಈ ವೇಳೆ ಒಂದು ಸ್ಕಾರ್ಪಿಯೋ ಕಾರು ಬೆಂಗಳೂರಿಗೆ ತೆರಳಬೇಕಿತ್ತು. ಸ್ವಿಫ್ಟ್ ಕಾರು ಕನಕಪುರ ಬರಬೇಕಾಗಿತ್ತು. ಸ್ವಿಫ್ಟ್ ಕಾರಿನಲ್ಲಿದ್ದವರಿಗೆ ವಿಳಾಸ ಗೊತ್ತಿರಲಿಲ್ಲ. ಹೀಗಾಗಿ ಅಲ್ಲಿ ನಿಲ್ಲಿಸಿ ಲಗೇಜ್ ಗಳನ್ನು ಒಂದು ಕಾರಿಂದ ಇನ್ನೊಂದು ಕಾರಿಗೆ ಹಾಕುತ್ತಿದ್ದೆವು ಎಂದು ಚೇತನ್ ಹೇಳಿದ್ದಾರೆ.
Advertisement
Advertisement
ಈ ವೇಳೆ ಮೃತರಾದ ಶಶಿಕುಮಾರ್ ಹಾಗು ಸುನಿಲ್ ಅಲ್ಲೇ ಬ್ಯಾಗ್ ಹಿಡಿದುಕೊಂಡು ನಿಂತಿದ್ದರು. ಇದೇ ಸಂದರ್ಭದಲ್ಲಿ ಈ ಕಡೆಯಿಂದ ಸಿಟಿ ರವಿ ಅವರ ಕಾರು ಬಂತು. ಅವರ ಕಾರು ತುಂಬಾ ಸ್ಪೀಡ್ ನಲ್ಲಿತ್ತು. ಬಲಬದಿಗೆ ಕಾರು ಚಲಿಸಲು ಜಾಗವಿತ್ತು. ಆದ್ರೆ ಅವರು ಆ ಕಡೆ ಹೋಗಲಿಲ್ಲ. ಬದಲಾಗಿ ಸ್ಪೀಡಲ್ಲಿದ್ದ ಕಾರು ನೇರವಾಗಿ ಸ್ಕಾರ್ಪಿಯೋ ಕಾರನ್ನು ಟಚ್ ಮಾಡಿಕೊಂಡು ಸುನಿಲ್ ಹಾಗೂ ಶಶಿಕುಮಾರ್ ಅವರಿಗೆ ಗುದ್ದಿದೆ ಅಂದಿದ್ದಾರೆ. ಇದನ್ನೂ ಓದಿ: ಮೂತ್ರ ವಿಸರ್ಜನೆ ಮಾಡ್ತಿದ್ದವರಿಗೆ ಶಾಸಕ ಸಿಟಿ ರವಿ ಕಾರು ಡಿಕ್ಕಿ- ಇಬ್ಬರ ದುರ್ಮರಣ
Advertisement
ಗೆಳೆಯರಾದ ಮುನ್ನಾಭಾಯಿ ಹಾಗೂ ಮಂಜು ಸ್ಕಾರ್ಪಿಯೋ ಮುಂದುಗಡೆ ಇದ್ದರು. ಸ್ಕಾರ್ಪಿಯೋಗೆ ಗುದ್ದಿದ ಕಾರು ನಂತರ ಸ್ವಿಫ್ಟ್ ಕಾರಿಗೂ ಹೊಡೆದಿದೆ. ಹೀಗಾಗಿ ಮುಂದುಗಡೆ ನಿಂತಿದ್ದವರಿಗೂ ಗಾಯಗಳಾಗಿದ್ದು, ಅವರಲ್ಲಿ ಓರ್ವನ ತೊಡೆ ಮುರಿದಿದೆ. ಸದ್ಯ ಅವರು ಬೆಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ಜನರಿಗೆ ಗಾಯಗಳಾಗಿದೆ ಎಂದು ಚೇತನ್ ಹೇಳಿದ್ದಾರೆ.
Advertisement
ಸಿಟಿ ರವಿಯವೇ ಕಾರು ಚಲಾಯಿಸುತ್ತಿದ್ದರು. ಸ್ಕಾರ್ಪಿಯೋ ಹಾಗೂ ಸ್ವಿಫ್ಟ್ ಕಾರಿಗೆ ಗುದ್ದಿದ ರಭಸಕ್ಕೆ ಶಾಸಕರ ಕಾರು ಕೂಡ ಮುಂದೆ ಹೋಗಿ ಪಲ್ಟಿ ಹೊಡೆದಿದೆ. ಇದೇ ವೇಳೆ ನಮ್ಮ ಹುಡುಗರಿಗೆ ಹೀಗೆ ಆಗಿದ್ದರಿಂದ ಗಾಬರಿಗೊಂಡೆವು. ಬಳಿಕ ಗೆಳೆಯರಾದ ಸಂತೋಷ್ ಹಾಗೂ ಜಯಚಂದ್ರ ಸಿ ಟಿ ರವಿ ಬಳಿ ಹೋಗಿ ಯಾಕ್ ಸರ್ ಹಿಂಗೆ ಮಾಡಿದ್ರಿ, ಪ್ರಾಣಕ್ಕೆ ಬೆಲೆನೇ ಇಲ್ವ ಅಂತ ಕೇಳಿದ್ರು. ಆಗ ಅವರು ನಾನು ನೋಡಿಲ್ಲ, ಮಾಡಿಲ್ಲ.. ನೀವ್ಯಾಕೆ ಹಿಂಗೆ ನಿಂತಿದ್ದೀರಿ ಅಂತ ಕೇಳಿದ್ರು. ಹೀಗೆ ಮಾತಿಗೆ ಮಾತು ಬೆಳೆಯಿತು. ಅವರ ಕಾರಿನಲ್ಲಿ 3,4 ಜನ ಇದ್ದರು. ಸಿಟಿ ರವಿಯವರು ಡ್ರಿಂಕ್ಸ್ ಮಾಡಿದ್ದರು. ಇದೇ ಸಂದರ್ಭದಲ್ಲಿ ಅವರ ಕಡೆಯಿಂದ ಹುಡುಗರು ಬಂದ್ರು. ಅಲ್ಲದೇ ಗೆಳೆಯ ಪುನೀತ್ ಮೇಲೆ ರೇಗಾಡಿದ್ರು. ಕಾರು ಹತ್ತು ನಿನಗೆ ಎಲ್ಲಿ ಟ್ರೀಟ್ ಮೆಂಟ್ ಕೊಡಿಸಬೇಕು ಅಲ್ಲಿ ಕೊಡಿಸ್ತೀನಿ ಎಂದು ಗದರಿದ್ರು ಎಂದು ತಿಳಿಸಿದ್ದಾರೆ.
ಇದೇ ವೇಳೆ ಪೊಲೀಸ್ ಜೀಪ್, ಅಂಬುಲೆನ್ಸ್ ಬಂತು. ನಮ್ಮನ್ನು ಅಲ್ಲಿಂದ ಕಳಿಸಿಬಿಟ್ಟರು. ಘಟನೆ ನಡೆದು 8 ಗಂಟೆಯಾದ್ರೂ ಶಾಸಕರು ಏನಾಗಿದೆ ಎಂದು ಬಂದು ಕೇಳಿಲ್ಲ. ಪೊಲೀಸರು ಅವರ ಕಾರನ್ನು ವಶಕ್ಕೆ ಪಡೆದುಕೊಂಡಿಲ್ಲ. ಪೊಲೀಸರು ಕೂಡ ನಮ್ಮನ್ನಷ್ಟೇ ವಿಚಾರಿಸಿದ್ರು ಎಂದು ಪೊಲೀಸರ ವಿರುದ್ಧವೂ ಅಸಾಮಾಧಾನ ಹೊರಹಾಕಿದ್ದಾರೆ.
ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಸಿ ಟಿ ರವಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಚೇತನ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv