ಮಂಡ್ಯ: ಕೇಂದ್ರ ಸರ್ಕಾರ ನಗದೀಕರಣ ಯೋಜನೆಯಿಂದ ಆಸ್ತಿಯನ್ನು ಉತ್ಪಾದನಾ ಘಟಕವಾಗಿ ಪರಿವರ್ತಿಸಲು ಮುಂದಾಗಿದೆ. ಆದರೆ ಆಸ್ತಿ ನಿರ್ವಹಣೆ ಹೆಸರಲ್ಲಿ ಬಿಳಿ ಆನೆ ಸಾಕುವ ಆಸಕ್ತಿ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಆಸ್ತಿ ನಗದೀಕರಣ ಮಾಡುವ ಯೋಜನೆ 1991ರಿಂದಲೂ ನಡೆಯುತ್ತಿದೆ. ಆದರೆ ಹಿಂದೆ ಆಸ್ತಿ ನಿರ್ವಹಣೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿತ್ತು. ಭ್ರಷ್ಟಾಚಾರದಿಂದ ಹೊರತರುವುದು ಹಾಗೂ ಉತ್ಪಾದನಾ ಘಟಕವಾಗಿ ಪರಿವರ್ತಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
Advertisement
Advertisement
ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಅಭಿವೃದ್ಧಿಗೆ ವೇಗ ಸಿಕ್ಕಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಕೇವಲ ಭ್ರಷ್ಟಾಚಾರವೇ ತುಂಬಿತ್ತು. ಆದರೆ ಅಭಿವೃದ್ಧಿ ಕುಂಠಿತವಾಗಿತ್ತು ಎಂದರು. ಇದನ್ನೂ ಓದಿ: ಕಾಂಗ್ರೆಸ್ ಹಡಗು ಸಮುದ್ರದ ಮಧ್ಯದಲ್ಲಿ ಸಿಲುಕಿ ಗಿರಗಿರನೆ ತಿರುಗುತ್ತಿದೆ: ಸದಾನಂದಗೌಡ
Advertisement
ಮೇಕೆದಾಟು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಆದರೆ ನೆರೆಯ ರಾಜ್ಯಗಳ ನಡುವೆ ಯಾವುದೇ ರೀತಿಯ ಗಲಾಟೆ ಇಲ್ಲದೆ, ಶಾಂತಿಯುತವಾಗಿ ಇತ್ಯರ್ಥಪಡಿಸಿಕೊಳ್ಳುವ ಅವಶ್ಯಕತೆ ಇದೆ. ಕಾವೇರಿ ನೀರಿನ ಹಂಚಿಕೆಯಾಗಿದ್ದು, ನಮ್ಮ ನೀರನ್ನು ನಾವು ಬಳಸಿಕೊಳ್ಳಲು ಸುಪ್ರೀಂಕೋರ್ಟ್ ಸಹ ಮಧ್ಯ ಪ್ರವೇಶಿಸಲು ಅವಕಾಶವಿಲ್ಲ ಎಂದು ಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದರು.
Advertisement
ಇಂದಿರಾ ಕ್ಯಾಂಟೀನ್‍ನ ಹೆಸರನ್ನು ಅನ್ನಪೂರ್ಣ ಕ್ಯಾಂಟೀನ್ ಎಂದು ಬದಲಾಯಿಸುತ್ತೇವೆ. ಕಾಂಗ್ರೆಸ್ ಪಕ್ಷದ ನಾಯಕಿಯ ಹೆಸರು ಇಡಲಾಗಿದೆ. ನಾವು ರಾಜಕಾರಣ ಹೊರತುಪಡಿಸಿ ಹೆಸರಿಡಲು ಮುಂದಾಗಿದ್ದೇವೆ. ಅನ್ನಪೂರ್ಣ ಎಂಬ ಹೆಸರು ನಮ್ಮ ಪಕ್ಷದಲ್ಲಿ ಯಾವ ನಾಯಕಿಯರ ಹೆಸರೂ ಇಲ್ಲ. ಕಾಂಗ್ರೆಸ್ ಸರ್ಕಾರ ದೇಶದಲ್ಲಿ 216 ಯೋಜನೆಗಳಿಗೆ ಒಂದೇ ಕುಟುಂಬದ ಹೆಸರಿಟ್ಟಿದೆ. ಹಾಗಾದರೆ ಬೇರೆಯವರ ಕೊಡುಗೆ ಏನೂ ಇಲ್ಲವೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್‍ನವರು ತಮ್ಮ ಪಕ್ಷದ ನಾಯಕರ ಹೆಸರಿಟ್ಟು ಅವರಿಲ್ಲದೆ ದೇಶವೇ ಇಲ್ಲವೆಂಬ ಭ್ರಮೆ ಸೃಷ್ಟಿಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ತಾರತಮ್ಯ ಮಾಡಲಾಗಿಲ್ಲ. ಇತ್ತೀಚಿಗೆ 8 ಸಾವಿರ ಕೋಟಿ ರೂ. ಕರ್ನಾಟಕದ ಪಾಲು ಬಿಡುಗಡೆ ಮಾಡಿದ್ದಾರೆ. ಕೆಲವರಿಗೆ ಸುಳ್ಳೇ ಮನೆ ದೇವರು, ಸುಳ್ಳನ್ನೇ ಸತ್ಯ ಎಂದು ಹೇಳುತ್ತಾರೆ. 2 ವರ್ಷದ ಹಿಂದಿನ ಅಪಘಾತ ಪ್ರಕರಣದಲ್ಲಿ ಎಲ್ಲ ಕುಡುಕರು ಸೇರಿ ನನಗೆ ಕುಡುಕನ ಪಟ್ಟ ಕಟ್ಟಿದ್ದರು. ಹಾಗೆಯೇ ಜಿಎಸ್‍ಟಿ ವಿಚಾರದಲ್ಲೂ ಸುಳ್ಳು ಆರೋಪ ಮಾಡಲಾಗುತ್ತಿದೆ. ಆದರೆ ವಾಸ್ತವವಾಗಿ ಕರ್ನಾಟಕದ ಪಾಲನ್ನು ಕೇಂದ್ರ ಬಿಡುಗಡೆ ಮಾಡಿದೆ ಎಂದು ಸಮರ್ಥಿಸಿಕೊಂಡರು.
ಬೆಂಗಳೂರು-ಮೈಸೂರು ದಶಪಥ ರಸ್ತೆ ಯೋಜನೆ ಕ್ರೆಡಿಟ್ ಪಡೆಯಲು ಕಿತ್ತಾಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವರು ಚಂದ್ರಲೋಕದ ಸೈಟಿಗೆ ಈಗಲೇ ಅರ್ಜಿ ಹಾಕಿಸಿ ಬಿಡುತ್ತಾರೆ. ಈಗಲೇ ಹೋಗಿ ಅಲ್ಲಿ ಮನೆ ಕಟ್ಟಲು ಸಾಧ್ಯವೇ? ಕೆಲವರು ಅರ್ಜಿ ಹಾಕಿ ಕೊನೆಗೆ ನಾನೇ ಅರ್ಜಿ ಕೊಟ್ಟಿದ್ದೆ ಎನ್ನುತ್ತಾರೆ. ಆದರೆ ಅರ್ಜಿ ಕಿಮ್ಮತ್ತೇನು, ಹಣ ಬಿಡುಗಡೆಯಾಗಿದ್ದು ಯಾವಾಗ? ಮಂಜೂರಾಗಿದ್ದು ಯಾವಾಗ? ಅರ್ಜಿ ಸಲ್ಲಿಸಿದವರಿಗೆ ಏನು ಕಿಮ್ಮತ್ತು ಕೊಡಬೇಕೋ ಕೊಡಿ, ಹಣ ಬಿಡುಗಡೆ ಮಾಡಿ, ಕೆಲಸ ಪ್ರಾರಂಭ ಮಾಡಿದವರಿಗೆ ಏನು ಕಿಮ್ಮತ್ತು ಕೊಡಬೇಕೋ ಕೊಡಿ ಎಂದರು.