– ಸರ್ಕಾರಕ್ಕೆ ಬ್ಯಾಲೆಟ್‌ಗಿಂತ ಬುಲೆಟ್ ಮೇಲೆ ನಂಬಿಕೆ
– ನಕ್ಸಲರಿಗೆ ಹಣ, ಶಸ್ತ್ರಾಸ್ತ್ರ ಎಲ್ಲಿಂದ ಬಂತು? ಎಂದು ಪ್ರಶ್ನೆ|
ಚಿಕ್ಕಮಗಳೂರು: ರಾಜ್ಯ ಸಾವಿನ ಮನೆಯಾಗಿದೆ. ಆದ್ರೆ ಸರ್ಕಾರಕ್ಕೆ ಡಿನ್ನರ್ ಪಾಲಿಟಿಕ್ಸ್‌ದ್ದೇ ಚಿಂತೆಯಾಗಿದೆ. ಡಿನ್ನರ್ ಮೀಟಿಂಗ್, ಟೆಂಪಲ್ ರನ್ ಸ್ವಾರ್ಥಕ್ಕಾಗಿ ಮಾಡ್ತಿರೋದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಕಿಡಿಕಾರಿದರು.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ನಡೆಯುತ್ತಿದ್ದು, ಕರ್ನಾಟಕ ಸಾವಿನ ಮನೆಯಂತಾಗಿದೆ. 2,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ತಜ್ಞರ ಸಮಿತಿ ರಚನೆಯಾಗಿದ್ದರೂ ಬಾಣಂತಿಯರು, ಹಸುಗೂಸುಗಳ ಸಾವಿಗೆ ಕಾರಣವೇನೆಂದು ತಿಳಿದಿಲ್ಲ ಎಂದರು.ಇ
ಇಂತಹ ಸಂದರ್ಭದಲ್ಲಿ ಡಿನ್ನರ್ ಮೀಟಿಂಗ್ ಅಲ್ಲ, ಸಾವಿಗೆ ಕಾರಣವಾದ ಸಂಬಂಧ ಉನ್ನತ ಮೀಟಿಂಗ್ ಮಾಡಬೇಕಿತ್ತು. ಸಾವಿಗೆ ಕಾರಣ ಆಸ್ಪತ್ರೆಯೋ, ವೈದ್ಯರೋ, ಔಷಧಿಯೋ ಏನು ಎಂದು ತಿಳಿಯಬೇಕಿತ್ತು. ಆದರೆ, ರಾಜ್ಯ ಸರ್ಕಾರಕ್ಕೆ ಸಂವೇದನೆ ಇಲ್ಲದಂತಾಗಿದೆ. ಕಲ್ಲು ಹೃದಯ, ಹೃದಯ ಹೀನರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ನಕ್ಸಲರು ತಂತ್ರಗಾರಿಕೆ ಕಾರಣಕ್ಕೆ ಶರಣಾದ್ರಾ?
ನಕ್ಸಲರು ತಂತ್ರಗಾರಿಕೆ ಕಾರಣಕ್ಕೆ ಶರಣಾಗಿದ್ದಾರೋ ಅಥವಾ ನಕ್ಸಲ್ ಸಿದ್ಧಾಂತದಿಂದ ಹೊರಬಂದು ಶರಣಾಗಿದ್ದಾರೋ ಎಂಬುದನ್ನು ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು. ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ. ನಕ್ಸಲರ ಶರಣಾಗತಿ ಹೆಸರಿನಲ್ಲಿ ಕಾರ್ಯಚಟುವಟಿಕೆ ಬಲಗೊಳಿಸಲು ಅವಕಾಶ ನೀಡಿದಂತೆ ಆಗಬಾರದು. ಅವರ ಚಲನವಲನಗಳ ಮೇಲೆ ನಿಗಾ ಇಡುವುದರ ಜೊತೆಗೆ ಅವರು ತನಿಖೆಗೆ ಸಹಕರಿಸಬೇಕು ಎಂದರು.
ಬ್ಯಾಲೆಟ್‌ಗಿಂತ ಬುಲೆಟ್ ಮೇಲೆ ನಂಬಿಕೆ:
ನಕ್ಸಲರ ಬಳಕೆ ಶಸ್ತ್ರಾಸ್ತ್ರ ಪತ್ತೆ ಕುರಿತು ಪ್ರತಿಕ್ರಿಯಿಸಿದ ಅವರು, ನಕ್ಸಲರು ಎಲ್ಲಿ ಕಾರ್ಯಾಚರಣೆ ಮಾಡಿದ್ದರು? ಹಣ, ಶಸ್ತ್ರಾಸ್ತ್ರ ಎಲ್ಲಿಂದ ಬಂತು? ಯಾವ ವ್ಯಕ್ತಿ, ಸಂಘಟನೆ ಸಹಾಯ ಮಾಡಿದ್ದಾರೆ? ಎಲ್ಲಾ ಮಾಹಿತಿ ಹಂಚಿಕೊಂಡರೆ ಶರಣಾಗತಿಗೆ ಅರ್ಥ ಬರುತ್ತದೆ? ನಕ್ಸಲ್ ಸಿದ್ಧಾಂತ ಸಂವಿಧಾನಕ್ಕೆ ವಿರುದ್ಧವಾದ ಸಿದ್ಧಾಂತ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಸಿದ್ಧಾಂತ. ಅವರಿಗೆ ಬ್ಯಾಲೆಟ್ ಮೇಲೆ ನಂಬಿಕೆ ಇಲ್ಲ, ಬುಲೆಟ್ ಮೇಲೆ ನಂಬಿಕೆ ಇದೆ. ನಕ್ಸಲರಿಂದ ನಾಗರಿಕರು, ಪೊಲೀಸರು, ಸೈನಿಕರು ಪ್ರಾಣತ್ಯಾಗ ಮಾಡಿದ್ದಾರೆ. ಈ ಹಿನ್ನೆಲೆ ಪ್ಯಾಕೇಜ್ ನೀಡುವ ಮುನ್ನ ಎಲ್ಲಾ ಮಾಹಿತಿ ಕಲೆ ಹಾಕಬೇಕು. ನಕ್ಸಲ್ ಶರಣಾಗತಿ ಒಂದು ತಂತ್ರಗಾರಿಕೆ ಆಗಬಾರದು ಎಂದು ಆಗ್ರಹಿಸಿದರು.
 

 
		 
		 
		 
		 
		
 
		 
		 
		 
		