ಲಂಡನ್/ನವದೆಹಲಿ: ಡೊನಾಲ್ಡ್ ಟ್ರಂಪ್ (Donald Trump) ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗುತ್ತಿದ್ದಂತೆ ಇನ್ನೊಂದು ಕಡೆ ಕಚ್ಚಾ ತೈಲ ದರ (Crude Oil Price) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡಿದೆ.
ಟ್ರಂಪ್ ಸರ್ಕಾರ ತೆರಿಗೆ ಸಮರ ಘೋಷಿಸಿದ ಒಂದು ವಾರದಲ್ಲಿ ಕಚ್ಚಾ ತೈಲ ದರ ಒಂದು ಬ್ಯಾರೆಲ್ (159 ಲೀಟರ್) ಬೆಲೆ ಸುಮಾರು 10 ಡಾಲರ್(ಅಂದಾಜು 850 ರೂ.) ಇಳಿಕೆಯಾಗಿದೆ.
ತೈಲ ಮತ್ತು ಅನಿಲ ವಲಯವನ್ನು ಈ ಸುಂಕಗಳಿಂದ ವಿನಾಯಿತಿ ನೀಡಲಾಗಿದ್ದರೂ, ಹಣದುಬ್ಬರದ ಕಳವಳ, ಆರ್ಥಿಕ ಹಿಂಜರಿತ ಭೀತಿ, ನಿಧಾನ ಆರ್ಥಿಕ ಬೆಳವಣಿಗೆ ಮತ್ತು ವ್ಯಾಪಾರ ವಿವಾದಗಳು ತೀವ್ರಗೊಂಡಿರುವುದರಿಂದ ಬೆಲೆ ಇಳಿಕೆಯಾಗಿದೆ. ಈ ಮೂಲಕ ಮೂರು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿವೆ.
ಬ್ಯಾರೆಲ್‌ಗೆ 72.94 ಡಾಲರ್‌ನಲ್ಲಿ (ಅಂದಾಜು 6,250) ವಹಿವಾಟು ನಡೆಸುತ್ತಿದ್ದ ಬ್ರೆಂಟ್ ಕಚ್ಚಾ ತೈಲವು ದರ ಈಗ 62.91 ಡಾಲರ್‌ಗೆ (ಅಂದಾಜು 5,390 ರೂ.) ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು ಬ್ಯಾರೆಲ್ ದರ 7% ಇಳಿಕೆಯಾಗಿ 59.34 ಡಾಲರ್ (ಅಂದಾಜು 5,090ರೂ.)ತಲುಪಿದೆ.
ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC+) ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಗಳನ್ನು ಘೋಷಿಸಿದೆ. ಮೇ ತಿಂಗಳಲ್ಲಿ ದಿನಕ್ಕೆ 4,11,000 ಬ್ಯಾರೆಲ್‌ಗಳನ್ನು (bpd) ತೈಲ ಉತ್ಪಾದನೆ ಮಾಡಲು ಮುಂದಾಗಿದೆ. ಈ ಹಿಂದೆ ನಿರ್ಧರಿಸಲಾಗಿದ್ದ 1,35,000 ಬಿಪಿಡಿಯಿಂದ ಹೆಚ್ಚು ಉತ್ಪಾದನೆ ಮಾಡುವ ನಿರ್ಧಾರ ಕೈಗೊಂಡಿದ್ದು ಇದು ತೈಲ ಬೆಲೆ ಕುಸಿಯಲು ಕಾರಣವಾಗಿದೆ. ಇದನ್ನೂ ಓದಿ: Black Monday ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ19 ಲಕ್ಷ ಕೋಟಿ
ಭಾರತದಲ್ಲೂ ಇಳಿಕೆಯಾಗುತ್ತಾ?
ಈ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುತ್ತಿತ್ತು. ಆದರೆ ತೈಲ ಬೆಲೆ ಏರಿಕೆಯಾದರೆ ದೇಶದಲ್ಲಿ ವಸ್ತುಗಳ ಬೆಲೆ ಏರಿಕೆಯಾಗುವ ಕಾರಣ ಕೇಂದ್ರ ಸರ್ಕಾರ ಈಗ ನಿತ್ಯ ದರ ಪರಿಷ್ಕರಣೆ ಮಾಡುವುದನ್ನು ನಿಲ್ಲಿಸಿದೆ.
ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ 2024ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು 2 ರೂ. ಇಳಿಕೆ ಮಾಡಿತ್ತು. ಇಳಿಕೆ ಮಾಡಿದ ನಂತರ ಕರ್ನಾಟಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 99.83 ರೂ. ಆಗಿದ್ದರೆ ಡೀಸೆಲ್ ದರ 85.93 ರೂ. ಇತ್ತು. ಇದನ್ನೂ ಓದಿ: ಸುಂಕ ನೀತಿಗೆ ವ್ಯಾಪಕ ವಿರೋಧ, ಟ್ರಂಪ್ ವಿರುದ್ಧ ತಿರುಗಿಬಿದ್ದ ಜನ – ಅಮೆರಿಕದ 1,200 ಸ್ಥಳಗಳಲ್ಲಿ ಬೃಹತ್ ಪ್ರತಿಭಟನೆ
2024ರ ಜೂನ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3.02 ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 3 ರೂ. ಹೆಚ್ಚಳ ಮಾಡಲಾಗಿತ್ತು. ದರ ಹೆಚ್ಚಳದಿಂದ ಪೆಟ್ರೋಲ್ ದರ 102.84 ರೂ. ಆಗಿದ್ದರೆ ಡೀಸೆಲ್ ದರ 89.79 ರೂ.ಗೆ ಏರಿಕೆಯಾಗಿತ್ತು.
ಏಪ್ರಿಲ್ 1 ರಿಂದ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 18.44% ರಿಂದ 21.17% ಗೆ ಸರ್ಕಾರ ಏರಿಕೆ ಮಾಡಿದ್ದರಿಂದ ಪ್ರತಿ ಲೀಟರ್ ಡೀಸೆಲ್ ಬೆಲೆ 2 ರೂ. ಏರಿಕೆಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.02 ರೂ. ಏರಿಕೆ ಮಾಡಿದ್ದರೆ ಡೀಸೆಲ್ ದರ 5 ರೂ. ಏರಿಕೆ ಮಾಡಿದೆ.
ಈ ಹಿಂದೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತ ಮಾಡಿದ ಬೆನ್ನಲ್ಲೇ ಹಲವು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ಹಾಕಿದ್ದರಿಂದ ದರ ಕಡಿತದ ಲಾಭ ಜನರಿಗೆ ಸಿಕ್ಕಿರಲಿಲ್ಲ.