ಬೆಳಗಾವಿ: ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ್ ವಿರುದ್ಧ ಪ್ರಕರಣ ದಾಖಲಿಸಿರುವುದು ಹಾಗೂ ಸಮಸ್ಯೆ ಸರಿಯಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪದ ಮೇರೆಗೆ ಸಬ್ ಇನ್ಸ್ ಪೆಕ್ಟರ್ ಅಮಾನತು ಮಾಡಲಾಗಿದೆ.
ಈ ಕುರಿತು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಮಾಹಿತಿ ನೀಡಿದ್ದು, ಕರ್ತವ್ಯ ಲೋಪ ಆರೋಪದಡಿ ಸದಲಗಾ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಅಮಾನತು ಮಾಡಲಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರೆದಿದೆ. ಯೋಧನ ಪ್ರಕರಣವನ್ನು ನಿರ್ವಹಿಸುವಲ್ಲಿ ಪಿಎಸ್‍ಐ ವಿಫಲರಾಗಿದ್ದಾರೆ. ಯೋಧ ಸಚಿನ್ ಬಿಡುಗಡೆಯಾದ ಬಳಿಕ ಅವರಿಂದಲೂ ಹೇಳಿಕೆ ಪಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಪಿಎಸ್‍ಐ ಅನಿಲಕುಮಾರ್ ಕರ್ತವ್ಯ ಲೋಪ ಕಂಡುಬಂದಿದೆ. ಹೀಗಾಗಿ ಅವಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಘಟನೆ ನಡೆದ ದಿನವೇ ಸಿಆರ್ ಪಿಎಪ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅಲ್ಲದೆ ಮಾರನೇ ದಿನ ಪತ್ರ ಸಹ ಬರೆಯಲಾಗಿತ್ತು. ಇದೀಗ ತನಿಖೆ ಮುಂದುವರೆದಿದ್ದು, ಪೇದೆಗಳು ತಪ್ಪು ಮಾಡಿರುವ ಕುರಿತು ಕೂಡ ವಿಚಾರಣೆ ನಡೆದಿದೆ ಎಂದು ರಾಘವೇಂದ್ರ ಅವರು ವಿವರಿಸಿದ್ದಾರೆ.
Advertisement
ಪ್ರಕರಣ ಹಿಂಪಡೆಯಲು ಚಿಂತನೆ
ಬೆಳಗಾವಿಯಲ್ಲಿ ಪೊಲೀಸರಿಂದ ಯೋಧನಿಗೆ ಥಳಿತ ಹಾಗೂ ಪ್ರಕರಣ ದಾಖಲಿಸಿರುವ ಕುರಿತು ದೆಹಲಿಯ ಸಿಆರ್ ಪಿಎಫ್ ಡಿಜಿ ಎ.ಪಿ.ಮಹೇಶ್ವರಿ ಜೊತೆ ಗೃಹ ಸಚಿವ ಬಸವರಾಜ್ ಬೊಮ್ಮಯಿ ಚರ್ಚೆ ನಡೆಸಿದ್ದು, ಪ್ರಕರಣವನ್ನು ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣ ವಾಪಸ್ ಪಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ತನಿಖೆ ಬಳಿಕ ಕೇಸ್ ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಯೋಧ ಸಚಿನ್ ಸಾವಂತ್ ಅವರಿಗೆ ಬಾಸುಂಡೆ ಬರುವ ಹಾಗೆ ಸದಲಗಾ ಪೊಲೀಸರು ಥಳಿಸಿರುವ ಆರೋಪಗಳು ಕೇಳಿ ಬಂದಿದೆ. ಯೋಧನಿಗೆ ಬಾಸುಂಡೆ ಬಂದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ನಡೆಗೆ ಕಿಡಿಕಾರಿದ್ದಾರೆ.
ಏಪ್ರಿಲ್ 23ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಮತ್ತು ಯೋಧನ ನಡುವೆ ಗಲಾಟೆ ನಡೆದಿತ್ತು. ತದನಂತರ ಪೊಲೀಸರು ಯೋಧನನ್ನು ಠಾಣೆಗೆ ಕರೆದುಕೊಂಡು ಬಂದು ಕೈಗೆ ಕೋಳ ಹಾಕಿದ್ದರು. ದೇಶ ಕಾಯುವ ಯೋಧನ ಕೈಗೆ ಕೋಳ ಹಾಕಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೈಗೆ ಕೋಳ ಹಾಕಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಂಗಳವಾರ ಯೋಧ ಸಚಿನ್ ಸಾವಂತ್ ಅವರಿಗೆ ಜಾಮೀನು ದೊರಕ್ಕಿದ್ದು, ಜೈಲಿನಿಂದ ಹೊರ ಬಂದಿದ್ದರು. ಖುದ್ದು ಸಿಆರ್ ಪಿಎಫ್ ಅಧಿಕಾರಿಗಳೇ ಸಚಿನ್ ಅವರನ್ನು ಕರೆತರಲು ಹೋಗಿದ್ದರು.