ಜೈಪುರ್: ಭಯೋತ್ಪಾದನೆಗೆ (Terrorism) ಹಣಕಾಸು ನೆರವು ನೀಡಿದ ಐವರು ಶಂಕಿತರನ್ನು ರಾಜಸ್ಥಾನ (Rajasthan) ಎಟಿಎಸ್ (ರಾಜಸ್ಥಾನದಲ್ಲಿ, ಭಯೋತ್ಪಾದನಾ ನಿಗ್ರಹ ದಳ) ಬಂಧಿಸಿದೆ. ಬಂಧಿತ ಮೌಲ್ವಿಗಳನ್ನು ಅಯೂಬ್, ಮಸೂದ್ ಮತ್ತು ಉಸ್ಮಾನ್ ಎಂದು ಗುರುತಿಸಲಾಗಿದೆ. ಇನ್ನೂ ಕರೌಲ್‌ನ ಜುನೈದ್ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ.
ಬಂಧಿತರಲ್ಲಿ ಒಬ್ಬನಾದ ಜೋಧ್‌ಪುರದ ಚೋಖಾದ ಅರೇಬಿಯಾ ಮದರಸಾದ ಧರ್ಮಗುರು ಆಯೂಬ್‌ನಿಂದ ಕೆಲವು ದಾಖಲೆಗಳನ್ನು ಎಟಿಎಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆತ 13 ವರ್ಷಗಳಿಂದ ಮದರಸಾದಲ್ಲಿ ಕೆಲಸ ಮಾಡುತ್ತಿದ್ದ. ಇನ್ನೂ ಮದರಸಾದ ಉಳಿದ ಶಿಕ್ಷಕರು ಉಗ್ರರಿಗೆ ಸಹಕರಿಸುವ ಚಟುವಟಿಕೆ ನಡೆಸುತ್ತಿದ್ದಾರೆಯೇ ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಇದನ್ನೂ ಓದಿ: ಉಗ್ರರ ಒಳನುಸುಳುವಿಕೆ ತಡೆಯಲು ಬಿಎಸ್‌ಎಫ್ ಕಟ್ಟೆಚ್ಚರ; ಕಾಶ್ಮೀರ ಕಣಿವೆಯಲ್ಲಿ ಭದ್ರತೆ ಹೆಚ್ಚಳ
ಎಟಿಎಸ್ (ATS) ಅಧಿಕಾರಿಗಳು ಆರೋಪಿಯ ಮನೆಯಿಂದ 3 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ಆರೋಪಿ ನಿರ್ಮಿಸಿದ್ದ ಗ್ರಂಥಾಲಯದಿಂದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಆತನ ರೂಮ್‌ನ್ನು ಅಧಿಕಾರಿಗಳು ಸೀಲ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಯೂಬ್‌ನ ಮಕ್ಕಳು ಹಾಗೂ ಪತ್ನಿ, ಆತ ಮೊಬೈಲ್‌ನಲ್ಲಿ ಯೂಟ್ಯೂಬ್ ಮಾತ್ರ ಬಳಸುತ್ತಿದ್ದ. ಸುಮಾರು 20-25 ಪೊಲೀಸರು ಮಫ್ತಿಯಲ್ಲಿ ಬಂದು ಮನೆಯನ್ನು ಸುತ್ತುವರಿದು, ಆತನನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
ಉಳಿದಂತೆ ಜೋಧ್‍ಪುರ್, ಬಾರ್ಮರ್ ಮತ್ತು ಕರೌಲಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಎಟಿಎಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಂಧಿತರನ್ನು ಜೈಪುರದ ಎಟಿಎಸ್ ಪ್ರಧಾನ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ದೌರ್ಬಲ್ಯಗಳೇ ಉಗ್ರರನ್ನ ಬಲಪಡಿಸಿತು, ಇಂದಿನ ಭಾರತ ಶತ್ರುಗಳ ಮನೆಗಳಿಗೇ ನುಗ್ಗಿ ಹೊಡೆಯುತ್ತೆ: ಮೋದಿ
