ನವದೆಹಲಿ: ರಹ್ಮನುಲ್ಲಾ ಗುರ್ಬಾಝ್ ಬೆಂಕಿ ಬ್ಯಾಟಿಂಗ್ ಹಾಗೂ ಮುಜೀಬ್ ಉರ್ ರೆಹಮಾನ್, ರಶೀದ್ ಖಾನ್ ಮಾರಕ ಬೌಲಿಂಗ್ ದಾಳಿಯಿಂದಾಗಿ ಇಂಗ್ಲೆಂಡ್ ವಿರುದ್ಧ ಆಫ್ಘಾನಿಸ್ತಾನ (England vs Afghanistan) 69 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದೆ.
ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ (Cricket World Cup 2023) 13ನೇ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಇಂಗ್ಲೆಂಡ್ (England) ಫೀಲ್ಡಿಂಗ್ ಆಯ್ದುಕೊಂಡಿತ್ತು. ಉತ್ತಮ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಆಂಗ್ಲ ಬೌಲರ್‌ಗಳನ್ನು ಚೆಂಡಾಡಿದ ಆಫ್ಘಾನಿಸ್ತಾನ (Afghanistan) ತಂಡ ಆಲೌಟ್ ಆಗಿ ಇಂಗ್ಲೆಂಡ್‌ಗೆ 285 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್ 40.3 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 215 ರನ್‌ಗಳನ್ನಷ್ಟೇ ಗಳಿಸಿ ಸೋಲನುಭವಿಸಿತು. ಇದನ್ನೂ ಓದಿ: ಹೈವೋಲ್ಟೇಜ್ ಪಂದ್ಯದ ಬಳಿಕ ಪಾಕ್ ನಾಯಕನಿಗೆ ಜೆರ್ಸಿ ಗಿಫ್ಟ್ ಮಾಡಿದ ಕೊಹ್ಲಿ: ವಾಸಿಂ ಅಕ್ರಮ್ ಗರಂ
ಆರಂಭಿಕರಾಗಿ ಕಣಕ್ಕಿಳಿದಿದ್ದ ಜಾನಿ ಬೈರ್‌ಸ್ಟೋವ್ ಕೇವಲ 2 ರನ್ ಗಳಿಸಿ ಎಲ್‌ಬಿಡಬ್ಲ್ಯೂ ಆಗಿ ಇಂಗ್ಲೆಂಡ್‌ಗೆ ಆರಂಭಿಕ ಆಘಾತ ನೀಡಿದರು. ನಂತರ ಜೊತೆಯಾದ ಡೇವಿಡ್ ಮಲನ್ ಮತ್ತು ಜೋ ರೂಟ್ ಜೊತೆಯಾಗಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. ಡೇವಿಡ್ ಮಲನ್ 32 ರನ್ ಗಳಿಸಿ (39 ಬಾಲ್, 4 ಫೋರ್) ಕ್ಲೀನ್ ಬೌಲ್ಡ್ ಆದರು. ಜೋ ರೂಟ್ ಕೇವಲ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ಈ ವೇಳೆ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದ ಹ್ಯಾರಿ ಬ್ರೂಕ್ ಮೈದಾನದಲ್ಲಿ 61 ಬಾಲ್‌ಗಳಿಗೆ 66 ರನ್ ಗಳಿಸಿ (7 ಫೋರ್, 1 ಸಿಕ್ಸ್) ಉತ್ತಮ ಪ್ರದರ್ಶನ ನೀಡಿದರು. ಆದರೆ ಅವರಿಗೆ ಜೊತೆಯಾಗಿ ಸಾಥ್ ಕೊಡುವಲ್ಲಿ ಇತರೆ ಆಟಗಾರರು ವಿಫಲರಾದರು. ಆಫ್ಘನ್ನರ ಸ್ಪಿನ್ ದಾಳಿಗೆ ಆಂಗ್ಲ ಬ್ಯಾಟರ್‌ಗಳು ತರಗೆಲೆಯಂತೆ ಉದುರಿ ಹೋದರು.
ಪರಿಣಾಮವಾಗಿ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಕೇವಲ 9 ರನ್ ಗಳಿಸಿ ಔಟಾದರು. ಲಿಯಾಮ್ ಲಿವಿಂಗ್ಸ್ಟೋನ್ 10 ರನ್ ಗಳಿಸಿ ಪೆವಿಲಿಯನ್ ಸೇರಿದರು. ಸ್ಯಾಮ್ ಕರ್ರನ್ ಕೂಡ ಕೇವಲ 10 ರನ್ ಗಳಿಸಲಷ್ಟೇ ಶಕ್ತರಾದರು. ಕ್ರಿಸ್ ವೋಕ್ಸ್ 9 ರನ್‌ಗಳಿಸಿ ಔಟಾದರು. ಆದಿಲ್ ರಶೀದ್ 20 ರನ್, ಮಾರ್ಕ್ ವುಡ್ 18 ರನ್ ಗಳಿಸಿ ಪೆವಿಲಿಯನ್‌ನತ್ತ ನಡೆದರು. ಇದನ್ನೂ ಓದಿ: ಸಿಕ್ಸ್ ಸಿಡಿಸಿ ದಾಖಲೆ ಬರೆದ ರೋಹಿತ್ ಶರ್ಮಾ
ಇಂಗ್ಲೆಂಡ್ ವಿರುದ್ಧ ಆಫ್ಘನ್ ಬೌಲರ್‌ಗಳು ಅಮೋಘ ಪ್ರದರ್ಶನ ತೋರಿದರು. ಮುಜೀಬ್ ಉರ್ ರೆಹಮಾನ್ ಹಾಗೂ ರಶೀದ್ ಖಾನ್ 3 ವಿಕೆಟ್ ಕಿತ್ತು ಗಮನ ಸೆಳೆದರು. ಮೊಹಮ್ಮದ್ ನಬಿ 2, ಫಜಲ್ಹಕ್ ಫಾರೂಕಿ ಹಾಗೂ ನವೀನ್-ಉಲ್-ಹಕ್ ತಲಾ 1 ಕಿತ್ತು ತಂಡದ ಗೆಲುವಿಗೆ ಸಹಕಾರಿಯಾದರು.
ಗುರ್ಬಾಝ್ ಬೆಂಕಿ ಬ್ಯಾಟಿಂಗ್
ಟಾಸ್ ಗೆದ್ದ ಇಂಗ್ಲೆಂಡ್ ತಂಡ ಅಫ್ಘಾನಿಸ್ತಾನಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಬ್ಯಾಟಿಂಗ್‌ಗೆ ಇಳಿದ ಅಫ್ಘಾನ್ ಭರ್ಜರಿ ಆರಂಭ ಪಡೆಯಿತು. ರಹ್ಮನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝರ್ದಾನ್ ತಂಡಕ್ಕೆ 114 ರನ್‌ಗಳ ಉತ್ತಮ ಜೊತೆಯಾಟ ನೀಡಿದರು. 16.4 ಓವರ್‌ನಲ್ಲಿ ಸ್ಪಿನ್ನರ್ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ಇಬ್ರಾಹಿಂ ಝರ್ದಾನ್ (28) ಔಟ್ ಆಗುವುದರೊಂದಿಗೆ ಅಫ್ಘಾನ್ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ರಹ್ಮನುಲ್ಲಾ ಗುರ್ಬಾಝ್ 57 ಎಸೆತಗಳಲ್ಲಿ 80 ರನ್ ಸಿಡಿಸಿ (8 ಬೌಂಡರಿ, 4 ಸಿಕ್ಸರ್) ಸಿಡಿಸಿ ಆಂಗ್ಲರನ್ನು ಚೆಂಡಾಡಿದರು. ನಂತರ ಗುರ್ಬಾಝ್ ರನ್‌ಔಟ್ ಆದರು. ಇದನ್ನೂ ಓದಿ: Record… Record… Record: ಇಂಡೋ-ಪಾಕ್ ಕದನದಲ್ಲಿ ಎಲ್ಲಾ ದಾಖಲೆ ಉಡೀಸ್!
ಬಳಿಕ ಬಂದ ಯಾವೊಬ್ಬ ಬ್ಯಾಟರ್ ಕೂಡ ಇಂಗ್ಲೆಂಡ್ ಬಲಿಷ್ಟ ಬೌಲಿಂಗ್ ಎದುರು ಹೆಚ್ಚು ಸಮಯ ಕ್ರೀಸಿನಲ್ಲಿ ನಿಲ್ಲಲು ಸಾಧ್ಯವಾಗದೇ ದಿಢೀರ್ ಕುಸಿತ ಕಂಡಿತು. ರಹಮತ್ ಶಾ 3 ರನ್ ಗಳಿಸಿ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆದರೆ, ನಾಯಕ ಹಶ್ಮತುಲ್ಲಾ ಶಾಹಿದಿ 14 ರನ್ ಗಳಿಸಿ ಜೊ ರೂಟ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು. ಅಝ್ಮತುಲ್ಲಾ ಓಮರ್ಝೈ, ಮೊಹಮ್ಮದ್ ನಬಿ ಕ್ರಮವಾಗಿ 19, 9 ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಬಳಿಕ ಕೊಂಚ ಚೇತರಿಸಿಕೊಂಡ ಅಫ್ಘಾನ್ ಇಕ್ರಂ ಅಲಿಖಿಲ್ ಮತ್ತು ರಶೀದ್ ಖಾನ್ ಜೋಡಿ 43 ರನ್‌ಗಳ ಜೊತೆಯಾಟ ನೀಡಿ ಮೊತ್ತ ಹೆಚ್ಚಿಸುವ ಯೋಜನೆಯಲ್ಲಿ ಇದ್ದರು. ಆದರೆ ರಶೀದ್ ಖಾನ್ 23 ರನ್ ಗಳಸಿ ಕ್ಯಾಚ್ ನೀಡಿ ಔಟಾದರು. ಇಕ್ರಂ ಅಲಿಖಿಲ್ 58 ಗಳಿಸಿ ಅರ್ಧಶತಕ ಬಾರಿಸಿ (3 ಬೌಂಡರಿ, 2 ಸಿಕ್ಸರ್) ಮಿಂಚಿದರು. ಮುಜೀಬ್ ಉರ್ ರಹ್ಮಾನ್ 28 ರನ್ ಗಳ ಉಪಯುಕ್ತ ಕೊಡುಗೆ ನೀಡಿದರು. ಅಂತಿಮ ಜೋಡಿಯಾದ ನವೀನ್ 5 ರನ್‌ಗೆ ರನೌಟ್ ಆದರು. ಫಝಲ್ ಹಕ್ ಫಾರೂಕಿ 2 ರನ್ ಗಳಿಸಿದರು.
ಇಂಗ್ಲೆಂಡ್ ಪರ ಆದಿಲ್ ರಶೀದ್ 3 ವಿಕೆಟ್ ಪಡೆದರೆ, ಮಾರ್ಕ್ ವುಡ್ 2, ಲಿಯಾಮ್ ಲಿವಿಂಗ್‌ಸ್ಟೋನ್, ಜೋ ರೂಟ್, ರೀಸ್ ಟೋಪ್ಲಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.
Web Stories