ಬೆಂಗಳೂರು: ಭರ್ಜರಿ ಲಯದಲ್ಲಿರೋ ಟೀಂ ಇಂಡಿಯಾ ಅತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರೋ ಟಿ20 ಸರಣಿ ವಶಪಡಿಸಿಕೊಳ್ಳೋ ಹುಮ್ಮಸ್ಸಿನಲ್ಲಿದೆ. ಇಂದು 3ನೇ ಟಿ20 ಪಂದ್ಯ ನಡೆಯಲಿದ್ದು, ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿ ವಶಪಡಿಸಿಕೊಳ್ಳೋ ತವಕದಲ್ಲಿದ್ದಾರೆ ಕೊಹ್ಲಿ ಬಾಯ್ಸ್.
ಸತತ ಎರಡು ಸೋಲುಗಳಿಂದ ಕಂಗೆಟ್ಟಿರೋ ನ್ಯೂಜಿಲೆಂಡ್ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ. ಸರಣಿ ಉಳಿಸಿಕೊಳ್ಳಬೇಕಾದ್ರೆ ಉಳಿದಿರೋ 3 ಪಂದ್ಯ ಗೆಲ್ಲಲೇಬೇಕು. ಸರಣಿ ಜೀವಂತವಾಗಿಡಬೇಕಾದ್ರೆ ಇಂದಿನ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ ನ್ಯೂಜಿಲೆಂಡ್ ತಂಡ.
Advertisement
Advertisement
ನ್ಯೂಜಿಲೆಂಡ್‍ನ ಸೆಡನ್ ಪಾರ್ಕ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಬ್ಯಾಟಿಂಗ್ ಸ್ನೇಹಿಯಾಗಿರೋ ಈ ಕ್ರೀಡಾಂಗಣದಲ್ಲಿ ರನ್ ಹೊಳೆ ಹರಿಯೋ ಸಾಧ್ಯತೆ ಇದೆ. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ ಪಂದ್ಯ ಆರಂಭವಾಗಲಿದೆ.
Advertisement
ಎರಡು ಪಂದ್ಯ ಗೆದ್ದು ಭರ್ಜರಿ ಫಾರ್ಮ್‍ನಲ್ಲಿರೋ ಟೀಂ ಇಂಡಿಯಾ 3 ನೇ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ. ಬ್ಯಾಟಿಂಗ್, ಬೌಲಿಂಗ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರೋ ಕೊಹ್ಲಿ ಬಾಯ್ಸ್ ಇಂದು ಕೂಡ ಅದೇ ಪ್ರದರ್ಶನ ನೀಡೋಕೆ ಸಿದ್ಧರಾಗಿದ್ದಾರೆ. ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ ಕೊಹ್ಲಿ, ರೋಹಿತ್ ಶರ್ಮಾ ಭಾರತದ ಬ್ಯಾಟಿಂಗ್ ಅಸ್ತ್ರ. ಮೊದಲೆರಡು ಪಂದ್ಯದಲ್ಲಿ ರೋಹಿತ್ ಶರ್ಮಾ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಲಯ ಕಂಡುಕೊಳ್ಳುವ ಸಾಧ್ಯತೆ ಇದೆ. ಉಳಿದಂತೆ ಶಿವಂ ದುಬೆ, ರವೀಂದ್ರ ಜಡೇಜಾ ಅಲ್ರೌಂಡರ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಶಮಿ, ಬೂಮ್ರಾ, ಚಹಲ್, ಶಾರ್ದೂಲ್ ಠಾಕೂರ್ ಬೌಲಿಂಗ್ ಅಸ್ತ್ರವಾಗಿದ್ದಾರೆ. ನಾಯಕ ಕೊಹ್ಲಿ ಮೊದಲೆರಡು ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆ ಇದೆ.
Advertisement
ನ್ಯೂಜಿಲೆಂಡ್ ತಂಡ ತವರು ನೆಲದಲ್ಲಿಯೇ ಮುಖಭಂಗ ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಅದ್ಭುತವಾಗಿ ನಡೆಸಿದ್ರು, ಬೌಲಿಂಗ್‍ನಲ್ಲಿ ಕಳಪೆ ಪ್ರದರ್ಶನ ತೋರಿ ಸೋಲು ಕಂಡಿತ್ತು. ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಪಡೆ ವಿಫಲವಾಗಿ ಸೋತಿತ್ತು. ಕಳೆದೆರಡು ಪಂದ್ಯದ ತಪ್ಪು ತಿದ್ದುಕೊಂಡು, ಟೀಂ ಇಂಡಿಯಾಗೆ ತಿರುಗೇಟು ಕೊಡೋಕೆ ನ್ಯೂಜಿಲೆಂಡ್ ಸಿದ್ಧವಾಗಿದೆ. ಗಪ್ಟಿಲ್, ಮನ್ರೋ, ವಿಲಿಯಮ್ಸನ್, ಟೇಲರ್ ನ್ಯೂಜಿಲೆಂಡ್ ಬ್ಯಾಟಿಂಗ್ ಬಲ. ಗ್ರಾಂಡ್ ಹೋಮ್, ಸ್ಯಾಂಟ್ನರ್ ಅಲ್ರೌಂಡರ್ ವಿಭಾಗದಲ್ಲಿ ಇದ್ದರೆ, ಸೋಧಿ, ಟಿಮ್ ಸೌಥಿ, ಹ್ಯಾಮಿಶ್, ಬೆನ್ನೆಟ್, ಬ್ಲೇರ್ ಟಿಕ್ನೆರ್ ಬೌಲಿಂಗ್ ಪಡೆಯಲಿದ್ದಾರೆ.
ಸಂಭವನೀಯ ಆಟಗಾರರು:
ಭಾರತ: ವಿರಾಟ್ ಕೊಹ್ಲಿ(ನಾಯಕ) ರೋಹಿತ್, ರಾಹುಲ್, ಶ್ರೇಯಸ್ ಅಯ್ಯರ್, ಪಾಂಡೆ, ಶಿವಂ ದುಬೆ, ಜಡೇಜಾ, ಶಮಿ, ಬೂಮ್ರಾ, ಚಹಲ್, ಶಾರ್ದೂಲ್ ಠಾಕೂರ್.
ನ್ಯೂಜಿಲೆಂಡ್: ವಿಲಿಯಮ್ಸನ್(ನಾಯಕ) ಗಪ್ಟಿಲ್, ಮನ್ರೋ,ಟೇಲರ್, ಸೀಫರ್ಟ್, ಗ್ರಾಂಡ್ ಹೋಮ್, ಸ್ಯಾಂಟ್ನರ್, ಸೋಧಿ, ಟಿಮ್ ಸೌಥಿ, ಹ್ಯಾಮಿಶ್ ಬೆನ್ನೆಟ್, ಬ್ಲೇರ್ ಟಿಕ್ನೆರ್.