ಸ್ಯಾಂಡಲ್ ವುಡ್ ನಲ್ಲಿ ಕ್ರಿಕೆಟ್ (Cricket) ಪಂದ್ಯ ಶುರು ಮಾಡಿದ ಕೀರ್ತಿ ಡಾ.ವಿಷ್ಣುವರ್ಧನ್ (Vishnuvardhan) ಅವರಿಗೆ ಸಲ್ಲುತ್ತದೆ. ಸಿನಿಮಾ ತಂಡಗಳನ್ನು ಕಟ್ಟಿಕೊಂಡು ವಿಷ್ಣು ಸದಾ ಕ್ರಿಕೆಟ್ ಆಡುತ್ತಿದ್ದರು. ವೃತ್ತಿಪರ ಕ್ರಿಕೆಟ್ ಆಟಗಾರರ ಜೊತೆಯೂ ಅವರು ಪಂದ್ಯಾವಳಿಗಳನ್ನು ಆಡಿದ್ದೂ ಇದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಕೂಡ ‘ಯಜಮಾನ ಪ್ರೀಮಿಯರ್ ಲೀಗ್’ (Yajamana Premier League) ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ.
ಈ ಬಾರಿಯ ಪಂದ್ಯಾವಳಿಯು ಇದೇ ಜೂನ್ 24 ಹಾಗೂ 25 ರಂದು ಬಿಐಸಿಸಿ ಇನ್ಫಿನಿಟಿ ಔಟ್ ಡೋರ್ ಗ್ರೌಂಡ್ ಮಾಗಡಿ ರಸ್ತೆ, ಬೆಂಗಳೂರಿನಲ್ಲಿ ನಡೆಯಲಿದೆ. ಈ ಮಾಹಿತಿಯನ್ನು ಮೊನ್ನೆಯಷ್ಟೇ ಕಿಚ್ಚ ಸುದೀಪ್ (Sudeep) ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಉದ್ದೇಶಗಳು ಸರಿಯಾಗಿದ್ದರೆ, ಅವು ನಮ್ಮ ನಂತರವೂ ಜೀವಂತವಾಗಿರುತ್ತವೆ ಎಂಬುದಕ್ಕೆ ಉದಾಹರಣೆ ಈ ಯಜಮಾನ ಪ್ರೀಮಿಯರ್ ಲೀಗ್’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು
ಡಾ.ವಿಷ್ಣು ಸೇನಾ ಸಮಿತಿಯು ಹಮ್ಮಿಕೊಂಡಿರುವ ಎರಡನೇ ಸೀಸನ್ ಇದಾಗಿದ್ದು, ವೀರಕಪುತ್ರ ಶ್ರೀನಿವಾಸ್ (Veerkaputra Srinivas) ನೇತೃತ್ವದಲ್ಲಿ ವಿಷ್ಣು ಸೇನಾನಿಗಳು ಪಂದ್ಯಗಳನ್ನು ಆಡಲಿದ್ದಾರೆ. ವಿಷ್ಣುವರ್ಧನ್ ಹೆಸರಿನಲ್ಲಿ ವೀರಕಪುತ್ರ ಶ್ರೀನಿವಾಸ್ ಅವರು ಹತ್ತಾರು ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಅದಕ್ಕೆ ಸೇರ್ಪಡೆ ಈ ಯಜಮಾನ ಕಪ್ ಆಗಿದೆ. ಜನಪರ ಕೆಲಸಗಳ ಜೊತೆಗೆ ಕ್ರೀಡಾ ಲೋಕಕ್ಕೂ ಉತ್ತೇಜನ ಕೊಡುವ ನಿಟ್ಟಿನಲ್ಲಿ ಈ ಪಂದ್ಯಾವಳಿ ಆಯೋಜನೆಗೊಂಡಿದೆ.
ಯಜಮಾನರ ಹೆಸರಿನಲ್ಲಿ ಕ್ರಿಕೆಟ್ ಆಡುವುದು ಎಲ್ಲರಿಗೂ ಸಂಭ್ರಮ ತರುವ ವಿಚಾರ. ಮೊದಲಿನಿಂದಲೂ ಯಜಮಾನರು ಕಲೆ, ಸಂಗೀತ, ಕ್ರಿಕೆಟ್ ಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಸ್ವತಃ ಅವರು ಕೂಡ ಕ್ರಿಕೆಟ್ ಆಡುತ್ತಿದ್ದರು. ಅವರ ನೆನಪಿನಲ್ಲಿ ನಾವೆಲ್ಲ ಕ್ರಿಕೆಟ್ ಆಡುತ್ತೇವೆ. ಇದಕ್ಕೆ ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಜೊತೆಯಾಗುತ್ತಿದ್ದಾರೆ. ಪ್ರತಿ ವರ್ಷವೂ ಇದನ್ನು ಆಯೋಜನೆ ಮಾಡುತ್ತೇವೆ ಎನ್ನುವುದು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ಮಾತು.