ಹುಟ್ಟು ಹಬ್ಬದಂದೇ ಟಿ-20ಯಲ್ಲಿ ಮೊದಲ ಶತಕ ಸಿಡಿಸಿದ ವಾರ್ನರ್

Public TV
2 Min Read
David Warner Main

ಸಿಡ್ನಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ತಮ್ಮ ಹುಟ್ಟು ಹಬ್ಬದಂದೇ ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದ್ದಾರೆ.

ಅಡಿಲೇಡ್‍ನಲ್ಲಿ ಶ್ರೀಲಂಕಾ ವಿರುದ್ಧ ಭಾನುವಾರ ನಡೆದ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭರ್ಜರಿ ಮಿಂಚಿದ್ದಾರೆ. ವಾರ್ನರ್ ಶ್ರೀಲಂಕಾ ವಿರುದ್ಧದ ಮೂರು ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಅಜೇಯ 100 ರನ್ ಗಳಿಸಿದರು. ಇನ್ನಿಂಗ್ಸ್ 56 ಎಸೆತಗಳನ್ನು ಎದುರಿಸಿದ ವಾರ್ನರ್ ಔಟಾಗದೆ 10 ಬೌಂಡರಿ, ನಾಲ್ಕು ಸಿಕ್ಸರ್ ಸೇರಿ 100 ಸಿಡಿಸಿದರು. ಇದನ್ನೂ ಓದಿ: ಟಿ-20 ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಲಂಕಾ ಬೌಲರ್

ಬಾಲ್ ಟ್ಯಾಂಪರಿಂಗ್‍ನಿಂದ ನಿಷೇಧಕ್ಕೆ ಗುರಿಯಾಗಿದ್ದ ವಾರ್ನರ್ 20 ತಿಂಗಳ ನಂತರ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟಿ-20 ಪಂದ್ಯ ಆಡಿದರು. ಮೊದಲ ಪಂದ್ಯದಲ್ಲೇ ಸ್ಫೋಟಕ ಬ್ಯಾಟಿಂಗ್ ಮಾಡಿ, ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. 2018ರ ಫೆಬ್ರವರಿ 21ರಂದು ನಡೆದ ಹಿಂದಿನ ಪಂದ್ಯದಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಅಂತರರಾಷ್ಟ್ರೀಯ ಟಿ-20 ಯಲ್ಲಿ ಇದು ವಾರ್ನರ್ ಅವರ ಮೊದಲ ಶತಕ. ಪ್ರಾಸಂಗಿಕವಾಗಿ ವಾರ್ನರ್ ತಮ್ಮ 33ನೇ ಹುಟ್ಟುಹಬ್ಬದಂದೆ ತಮ್ಮ ಮೊದಲ ಶತಕ ಸಿಡಿಸಿದರು. ಇದನ್ನೂ ಓದಿ: ಹಜಾರೆ ಟ್ರೋಫಿಯಲ್ಲಿ ಆರ್.ಅಶ್ವಿನ್ ಎಡವಟ್ಟು- ಮ್ಯಾಚ್ ರೆಫ್ರಿಯಿಂದ ದಂಡ

ವಾರ್ನರ್ ಅವರ ಶತಕದ ಸಹಾಯದಿಂದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್‍ವೆಲ್ 28 ಎಸೆತಗಳಲ್ಲಿ 62 ರನ್ ಮತ್ತು ನಾಯಕ ಆರನ್ ಫಿಂಚ್ 36 ಎಸೆತಗಳಲ್ಲಿ 64 ರನ್ ಗಳಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಶ್ರೀಲಂಕಾ ತಂಡವು 20 ಓವರ್‍ಗಳಲ್ಲಿ ಒಂಬತ್ತು ವಿಕೆಟ್‍ಗೆ 99 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ದಾಸುನ್ ಸನಾಕಾ 17 ರನ್ ಮತ್ತು ಕುಶಾಲ್ ಪೆರೆರಾ 16 ರನ್ ಗಳಿಸಿದರು. ಲೆಗ್ ಸ್ಪಿನ್ನರ್ ಆಡಮ್ ಜಂಪಾ ಆಸ್ಟ್ರೇಲಿಯಾ ಪರ ಮೂರು ವಿಕೆಟ್ ಪಡೆದರು.

ಆಸ್ಟ್ರೇಲಿಯಾ ಪರ ಟಿ-20 ಯಲ್ಲಿ ಶತಕ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಡೇವಿಡ್ ವಾರ್ನರ್ ಪಾತ್ರರಾದರು. ಇದಕ್ಕೂ ಮೊದಲು, ಗ್ಲೆನ್ ಮ್ಯಾಕ್ಸ್‌ವೆಲ್ 3 ಶತಕಗಳು, ಆರನ್ ಫಿಂಚ್ 2 ಶತಕಗಳು ಮತ್ತು ಶೇನ್ ವ್ಯಾಟ್ಸನ್ ಒಂದು ಶತಕ ಸಿಡಿಸಿದ್ದಾರೆ. ಫಿಂಚ್ ಜೊತೆ ಪವರ್‌ಪ್ಲೇನಲ್ಲಿ ವಾರ್ನರ್ 57 ರನ್ ಗಳಿಸಿದರು. ಇಬ್ಬರೂ ಮೊದಲ ವಿಕೆಟ್‍ಗೆ 122 ರನ್‍ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದರ ನಂತರ ಮ್ಯಾಕ್ಸ್‍ವೆಲ್ ಮತ್ತು ವಾರ್ನರ್ ಎರಡನೇ ವಿಕೆಟ್‍ಗೆ 107 ರನ್‍ಗಳ ಜೊತೆಯಾಟ ಆಡಿದರು.

David Warner Steven Smith 108616 730x419 m

ವಾರ್ನರ್ ಕಳೆದ ವರ್ಷ ಮಾರ್ಚ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್‍ನಲ್ಲಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ವಾರ್ನರ್ ಹಾಗೂ ಸ್ಟೀವ್ ಸ್ಮಿತ್‍ಗೆ ಒಂದು ವರ್ಷ ಹಾಗೂ ಕ್ಯಾಮರೂನ್ ಬೆನ್‍ಕ್ರಾಫ್ಟ್ ಮೇಲೆ 10 ತಿಂಗಳ ನಿಷೇಧ ಹೇರಲಾಗಿತ್ತು. ಜೊತೆಗೆ ಬೆನ್‍ಕ್ರಾಫ್ಟ್ ಗೆ ಶಿಕ್ಷೆ ವಿಧಿಸಲಾಗಿತ್ತು. ವಾರ್ನರ್ 2019ರ ವಿಶ್ವಕಪ್ ಟೂರ್ನಿ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಮರಳಿದರು. ವಿಶ್ವಕಪ್ ಟೂರ್ನಿಯಲ್ಲಿ ವಾರ್ನರ್ 647 ರನ್ ದಾಖಲಿಸಿದ್ದರು. ಅದರ ನಂತರ ಅವರು ಆಶಸ್ ಸರಣಿಯಲ್ಲಿ ಫ್ಲಾಪ್ ಆಗಿದ್ದರು. ಐದು ಪಂದ್ಯಗಳಲ್ಲಿ ಕೇವಲ 95 ರನ್ ಗಳಿಸಿದ್ದರು.

David Warner and Cameron Bancroft

Share This Article
Leave a Comment

Leave a Reply

Your email address will not be published. Required fields are marked *