ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಇಂದು ತಮ್ಮ 57ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ರವಿಚಂದ್ರನ್ ಅಭಿಮಾನಿಗಳು ರಾಜಾಜಿನಗರದ ಅವರ ಮನೆ ಮುಂದೆ ತಮ್ಮ ನೆಚ್ಚಿನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಸದ್ಯ ಅಭಿಮಾನಿಗಳು ಕೈಯಲ್ಲಿ ಗುಲಾಬಿ ಹೂ ಹಿಡಿದು ಪ್ರೇಮಲೋಕದ ಸೃಷ್ಠಿಕರ್ತನಿಗಾಗಿ ಕಾಯುತ್ತಿದ್ದಾರೆ.
ಇನ್ನೂ ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟುಹಬ್ಬದ ಪ್ರಯುಕ್ತ ‘ಪಡ್ಡೆ ಹುಲಿ’ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಆಗಿದೆ. ಈ ದಿನ ರವಿಚಂದ್ರನ್ ಅವರಿಗೆ ವಿಶೇಷವಾಗಿದ್ದು, ಈ ದಿನದಂದು ಅವರು ನಟಿಸಿದ ಹೊಸ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ನಲ್ಲಿ ರವಿಚಂದ್ರನ್ ಹಿಂದೆಂದೂ ಕಾಣಿಸದ ಪಾತ್ರದಲ್ಲಿ ಮಿಂಚಿದ್ದಾರೆ.
ಪಡ್ಡೆ ಹುಲಿ ಚಿತ್ರದಲ್ಲಿ ನಿರ್ಮಾಪಕ ಕೆ. ಮಂಜು ಅವರ ಮಗ ಇದೇ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆ ಚಿತ್ರದ ರವಿಚಂದ್ರನ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ನಟ ರವಿಚಂದ್ರನ್ ಅವರ ಹುಟ್ಟುಹಬ್ಬಕ್ಕೆ ಪಡ್ಡೆ ಹುಲಿ ನಿರ್ದೇಶಕ ಗುರುದೇಶ್‍ಪಾಂಡೆ ತಮ್ಮ ಪೇಸ್‍ಬುಕ್‍ನಲ್ಲಿ, “ಪ್ರಪ್ರಥಮ ಬಾರಿಗೆ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರು ನಮ್ಮ ಪಡ್ಡೆಹುಲಿ ಚಿತ್ರದಲ್ಲಿ ಕನ್ನಡ ಸಾಹಿತ್ಯಾಭಿಮಾನಿ ಹಾಗೂ ಕನ್ನಡ ಪ್ರೊಫೆಸರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಪುಸ್ತಕಗಳನ್ನು ಓದುವ ಹವ್ಯಾಸವನ್ನು ಕೈ ಬಿಟ್ಟಿರುವ ಯುವ ಜನತೆ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು, ಈ ಸಾರಿಯ ಅವರ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳು ಒಂದು ಪುಸ್ತಕ ಓದುವ ಮೂಲಕ ಅರ್ಥಪೂರ್ಣವಾಗಿ ರವಿಚಂದ್ರನ್ ಅವರ ಹುಟ್ಟು ಹಬ್ಬವನ್ನು ಆಚರಿಸಲು ಪಡ್ಡೆ ಹುಲಿ ಚಿತ್ರ ತಂಡ ಕರೆ ನೀಡುತ್ತಿದೆ. ಅವರ ಹುಟ್ಟು ಹಬ್ಬದ ಪ್ರಯುಕ್ತ ಬುಧವಾರ ಬೆಳಗ್ಗೆ 10:00 ಗಂಟೆಗೆ ವಿ.ರವಿಚಂದ್ರನ್ ಅವರ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಿದೆ” ಎಂದು ಪೋಸ್ಟ್ ಹಾಕಿದ್ದರು.
ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ನಿರ್ಮಾಪಕ ಕೆ.ಮಂಜುರವರ ಪುತ್ರ ಶ್ರೇಯಸ್ ನಾಯಕ ನಟನಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಎಂ.ರಮೇಶ್ ರೆಡ್ಡಿ(ನಂಗ್ಲಿ) ಬಂಡವಾಳ ಹೂಡಿದ್ದು, ಗುರು ದೇಶಪಾಂಡೆ ನಿರ್ದೇಶನವಿದೆ.