ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ (Cow Slaughter Bill) ವಿಚಾರವಾಗಿ ಆಡಳಿತ ಪಕ್ಷ (Congress) ಹಾಗೂ ವಿಪಕ್ಷ ಬಿಜೆಪಿ (BJP) ನಡುವಿನ ಗದ್ದಲ ತಾರಕಕ್ಕೇರಿದೆ. ಇದೇ ವಿಚಾರವಾಗಿ ಬುಧವಾರ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಗೋಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸುವ ಪ್ರಸ್ತಾಪ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಅಂತಹ ಪ್ರಸ್ತಾಪ ಈಗ ಸರ್ಕಾರದ ಮುಂದಿಲ್ಲ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ರವಿಕುಮಾರ್, ಸಚಿವರು ಈಗ ಈ ಉತ್ತರ ನೀಡಿದ್ದಾರೆ. ಆದರೆ ಜೂನ್ 3 ರಂದು ಮೈಸೂರಿನಲ್ಲಿ ಎಮ್ಮೆ ಕೋಣ ಕಡಿಯುವುದಾದರೆ ಗೋವುಗಳನ್ನು ಯಾಕೆ ಕಡಿಯಬಾರದು ಎಂದು ಅವರೇ ಹೇಳಿಕೆ ಕೊಟ್ಟಿದ್ದಾರೆ. ಈಗ ಪ್ರಸ್ತಾಪ ಇಲ್ಲ ಎನ್ನುವ ಉತ್ತರ ನೀಡಿದ್ದಾರೆ ನಮಗೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 40% ಕಮಿಷನ್ ಸೇರಿ ಎಲ್ಲದರ ತನಿಖೆಯಾಗ್ಲಿ- ಸಿದ್ದರಾಮಯ್ಯಗೆ ಬೊಮ್ಮಾಯಿ ಸವಾಲ್
Advertisement
ಅಲ್ಲದೇ ಈಗ ಇಲ್ಲ ಎನ್ನುತ್ತಿದ್ದೀರಿ, ಹಾಗಾದರೆ ಮುಂದೆ ಇದೆಯೇ? ಲಕ್ಷಾಂತರ ಜನ ಹಸು ಸಾಕುವವರಿದ್ದಾರೆ. ವಯಸ್ಸಾದ ಹಸುಗಳನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಿರಿ. ಸಮಾಜ ಈಗಾಗಲೇ ಇದಕ್ಕೆ ಪರಿಹಾರ ಕಂಡುಕೊಂಡಿದೆ. ಸರ್ಕಾರ ತನ್ನ ಸ್ಪಷ್ಟ ನಿರ್ಧಾರ ತಿಳಿಸಿಬೇಕು. ಇತ್ತೀಚಿನ ಹಬ್ಬದಲ್ಲಿ ಗೋಹತ್ಯೆಯಾಯಿತು ಯಾಕೆ ಕ್ರಮ ವಹಿಸಲಿಲ್ಲ. ಕಾಯ್ದೆ ಇದ್ದರೂ ಗೋವುಗಳ ರಕ್ಷಣೆ ಯಾಕಿಲ್ಲ? ಎಂದು ಅವರು ಕಿಡಿಕಾರಿದರು.
Advertisement
ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸರ್ಕಾರದ ಸ್ಪಷ್ಟನೆಗೆ ಆಗ್ರಹಿಸಿ ದನಿಗೂಡಿಸಲು ಮುಂದಾದರು. ಇದಕ್ಕೆ ಗರಂ ಆದ ಸಭಾಪತಿ ಬಸವರಾಜ ಹೊರಟ್ಟಿ, ಪೂಜಾರಿ ನೀವೀಗ ಪ್ರತಿಪಕ್ಷದ ನಾಯಕರಲ್ಲ. ಆಗಾಗ ಎದ್ದು ನಿಲ್ಲಬೇಡಿ ಎಂದು ತಾಕೀತು ಮಾಡಿದರು. ನಂತರ ಗೋಹತ್ಯೆಗೆ ಕ್ರಮ ವಹಿಸುವ ವಿಚಾರದ ಕುರಿತು ಸ್ಪಷ್ಟ ಉತ್ತರಕ್ಕೆ ಆಗ್ರಹಿಸಿ ಬಿಜೆಪಿ ನಾಯಕರು ಸದನದ ಬಾವಿಗಿಳಿದು ಧರಣಿ ನಡೆಸಿದರು.
Advertisement
Advertisement
ಈ ವೇಳೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಗೋಮಾಂಸ ರಫ್ತಿನದಲ್ಲಿ ದೇಶ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ಮೊದಲು ಉತ್ತರ ಕೊಡಬೇಕು. ಇದಕ್ಕೆ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್ ಸಾಥ್ ನೀಡಿ, ಬೇರೆ ರಾಜ್ಯದಲ್ಲಿ ಏನಿದೆ ಅದರ ಬಗ್ಗೆ ಮಾತನಾಡಿ, ಅಂಕಿ ಅಂಶ ತೆಗೆದುನೋಡಿ ಎಂದಿದ್ದಾರೆ.
ನಂತರ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಬಿಜೆಪಿ ಸದಸ್ಯರು ಸದನದ ಸಮಯ ಹಾಳು ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕೆ ಸದನದ ಸಮಯ ಹಾಳು ಮಾಡುತ್ತಿದ್ದಾರೆ. ಇದು ರಾಜಕೀಯ, ಮತಗಳ ಬೇಟೆಗೆ ಸದನದ ಸಮಯ ಬಲಿ ಕೊಡುತ್ತಿದ್ದಾರೆ. ನಮ್ಮ ನಿಲುವು ಹೇಳಲಾಗಿದೆ. ರಾಜಕೀಯವನ್ನು ಹೊರಗೆ ಹೋಗಿ ಮಾಡಿ. ನಿಮಗೆ ಸದನ ನಡೆಯುವುದು ಬೇಕಿಲ್ಲ ಎಂದು ಕಿಡಿಕಾರಿದ್ದಾರೆ.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಸಚಿವರು ಸೂಕ್ತ ಉತ್ತರ ಕೊಟ್ಟ ನಂತರ ಇದೇ ರೀತಿ ಉತ್ತರ ಕೊಡಬೇಕು ಎನ್ನುವ ಮೊಂಡುತನ ಸರಿಯಲ್ಲ ಎಂದಿದ್ದಾರೆ. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಗೋಹತ್ಯೆ ನಿಷೇಧ ಬಿಲ್ ವಾಪಸ್ ಪಡೆಯಲ್ಲ ಎನ್ನುವ ಭರವಸೆ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಸಚಿವ ವೆಂಕಟೇಶ್ ಇತ್ತೀಚೆಗೆ ಗೋಹತ್ಯೆ ನಡೆದಿದ್ದು ಕಂಡುಬಂದಲ್ಲಿ ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಆದರೂ ಸರ್ಕಾರದ ಉತ್ತರವನ್ನು ಖಂಡಿಸಿ ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ಮುಂದುವರೆಸಿದರು. ಸಭಾಪತಿ ಮನವಿಗೂ ಸ್ಪಂದಿಸದೆ ಘೋಷಣೆ ಕೂಗಿದರು. ಸಭಾಪತಿಗಳು ಮುಂದಿನ ಕಲಾಪ ಕೈಗೆತ್ತಿಕೊಂಡರೂ ಬಿಜೆಪಿ ಸದಸ್ಯರು ಘೋಷಣೆ ಕೂಗಿ ಧರಣಿ ನಡೆಸಿದ ಹಿನ್ನೆಲೆಯಲ್ಲಿ ಸದನದಲ್ಲಿ ಗದ್ದಲ ಉಂಟಾದ ಕಾರಣ ಕಲಾಪವನ್ನ ಮುಂದೂಡಲಾಯಿತು. ಇದನ್ನೂ ಓದಿ: ನನ್ನ ಬಳಿ ದಾಖಲೆ ಇದೆ- ಹೆಚ್‍ಡಿಕೆ ಪೆನ್‍ಡ್ರೈವ್ ಬಾಂಬ್
Web Stories