ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಕಾಲದ (Covid Scam) ಹಗರಣ ಆರೋಪ ಪ್ರಕರಣದ ಅಂತಿಮ ವರದಿ ಇಂದು ಜಸ್ಟೀಸ್ ಮೈಕಲ್ ಡಿ ಕುನ್ನಾ (John Michael D’Cunha) ಆಯೋಗ ಸಲ್ಲಿಕೆ ಮಾಡಲಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ 2,000 ಕೋಟಿಗೂ ಅಧಿಕ ಅಕ್ರಮ ನಡೆದಿದೆ ಎಂದು ಆರೋಪ ಕೇಳಿಬಂದಿತ್ತು. ಹಗರಣದ ಬಗ್ಗೆ ವರದಿ ಸಲ್ಲಿಸಲು ಕಾಂಗ್ರೆಸ್ (Congress) ಸರ್ಕಾರ 2023 ಆಗಸ್ಟ್ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಮೈಕಲ್ ಡಿ ಕುನ್ನಾ ನೇತೃತ್ವದ ಆಯೋಗ ರಚನೆ ಮಾಡಿತ್ತು. ಇಂದು ಸಂಜೆ 5 ಗಂಟೆಗೆ ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯಗೆ ಆಯೋಗ ವರದಿ ಸಲ್ಲಿಕೆ ಮಾಡಲಿದೆ. ಇದನ್ನೂ ಓದಿ: ಪೊನ್ನಣ್ಣ ನೀನು ಕಾಂಪ್ಲಿಮೆಂಟರಿ ಎಂಎಲ್‌ಎ, ನಮ್ಮ ಸಿಟ್ಟು ಜಾಸ್ತಿ ಮಾಡಬೇಡ: ಪ್ರತಾಪ್ ಸಿಂಹ ವಾಗ್ದಾಳಿ
ಈಗಾಗಲೇ ಮಧ್ಯಂತರ ವರದಿ ಸಲ್ಲಿಸಿ ಹಲವು ಪ್ರಕರಣಗಳ ತನಿಖೆಗೆ ಶಿಫಾರಸು ಮಾಡಿತ್ತು. ವೆಂಟಿಲೇಟರ್‌ಗಳ ಖರೀದಿ, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೋವಿಡ್-19 ನಿರ್ವಹಣಾ ಉಪಕರಣಗಳು, ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‌ಗಳ ಖರೀದಿ ಮತ್ತು ಸಂಗ್ರಹಣೆಯಲ್ಲಿ ಲೋಪ, ಅಕ್ರಮಗಳ ಆರೋಪದ ಬಗ್ಗೆ ತನಿಖೆಗೆ ಸೂಚಿಸಲಾಗಿತ್ತು. ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಪ್ರಜೆಗೆ ಚಾಕುವಿನಿಂದ ಇರಿದು ಕೊಲೆ
ಕುನ್ನಾ ಆಯೋಗದ ಮಧ್ಯಂತರ ವರದಿಯಲ್ಲಿ ಏನಿತ್ತು?
330ರಿಂದ 750ರ ದರದಲ್ಲಿ ಪಿಪಿಇ ಕಿಟ್‌ಗಳನ್ನು ಪೂರೈಸಲು ದೇಶೀಯ ಕಂಪನಿಗಳು ಸಿದ್ಧವಿದ್ದವು. ಈ ಕಂಪನಿಗಳಿಂದಲೇ ಕಿಟ್ ಖರೀದಿಸಬೇಕು ಎಂದು ಅಧಿಕಾರಿಗಳು ಶಿಫಾರಸು ಮಾಡಿದ್ದರೂ, ಅದನ್ನು ಬದಿಗೊತ್ತಲಾಗಿದೆ. 2,049ರಿಂದ 2,117 ದರದಲ್ಲಿ 3 ಲಕ್ಷ ಕಿಟ್‌ಗಳನ್ನು ಚೀನಾದ ಕಂಪನಿಗಳಿಂದ ಖರೀದಿಸುವ ಒಪ್ಪಂದಕ್ಕೆ ಸ್ವತಃ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ ಸಹಿ ಹಾಕಿದ್ದಾರೆ. ಮೂಲ ಖರೀದಿ ನಿಯಮಗಳು ಮತ್ತು ಕಾರ್ಯವಿಧಾನ ಅನುಸರಿಸದೇ, ಟೆಂಡರ್ ಕರೆಯದೇ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ರಾಜ್ಯದ ಬೊಕ್ಕಸಕ್ಕೆ ಅಪಾರವಾದ ನಷ್ಟ ಉಂಟು ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಏ.8ರವರೆಗೆ ಮಳೆಯ ಮುನ್ಸೂಚನೆ
2020ರ ಏಪ್ರಿಲ್‌ನಲ್ಲಿ ಚೀನಾದ ಡಿಎಚ್‌ಬಿ ಗ್ಲೋಬಲ್ ಹಾಂಗ್‌ಕಾಂಗ್ ಮತ್ತು ಬಿಗ್ ಫಾರ್ಮಾಸ್ಯುಟಿಕಲ್ಸ್ ಕಂಪನಿಗಳ ಜೊತೆ 62.71 ಕೋಟಿಗೆ ಮಾಡಿಕೊಂಡ ಒಪ್ಪಂದದಲ್ಲಿ ಎಲ್ಲ ಸ್ವರೂಪದ ಸಾಗಣೆ ವೆಚ್ಚವೂ ಸೇರಿತ್ತು. ಹೀಗಿದ್ದೂ, ಈ ಎರಡೂ ಕಂಪನಿಗಳಿಗೆ ಹೆಚ್ಚುವರಿಯಾಗಿ ಒಟ್ಟು 14.21 ಕೋಟಿ ಸಾಗಣೆ ವೆಚ್ಚ ನೀಡಲಾಗಿದೆ. ಇವೆಲ್ಲವೂ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಕಣ್ಗಾವಲಿನಲ್ಲೇ ನಡೆದಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಇದನ್ನೂ ಓದಿ: ಝೆಲೆನ್ಸ್ಕಿ ತವರೂರು ಕ್ರಿವಿ ರಿಹ್ ಮೇಲೆ ರಷ್ಯಾ ದಾಳಿ – 18 ಮಂದಿ ಸಾವು
ಅಂದಹಾಗೆ ಕೋವಿಡ್ ವೇಳೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಅಕ್ರಮ ನಡೆದಿದೆ ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ನೀಡಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಕೋವಿಡ್ ಅಕ್ರಮದ ತನಿಖೆಗೆ ಆಯೋಗವನ್ನು ರಚಿಸಿತ್ತು. ಇದನ್ನೂ ಓದಿ: Mandya | ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ವ್ಯಕ್ತಿ ಸಾವು