ನವದೆಹಲಿ: ಕೋವಿಡ್-19 (Covid 19) ಸೋಂಕಿನ ಭೀತಿಯಿಂದಾಗಿ ಮಹಿಳೆಯೊಬ್ಬರು ಬರೋಬ್ಬರಿ 3 ವರ್ಷಗಳ ಕಾಲ ಮಗನೊಂದಿಗೆ ಮನೆಯಲ್ಲೇ ಬಂಧಿಯಾಗಿದ್ದ ಅಚ್ಚರಿದಾಯಕ ಘಟನೆ ಗುರುಗ್ರಾಮ್‌ನ (Gurugram) ಚಕ್ಕರ್‌ಪುರದಲ್ಲಿ ನಡೆದಿದೆ.
ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಮುನ್‌ಮುನ್ ಮಜ್ಹಿ ಹೆಸರಿನ ಮಹಿಳೆಯ ಪತಿ ಸುಜನ್ ಮಾಝಿ, ಚಕ್ಕರ್‌ಪುರ ಪೊಲೀಸ್ ಪೋಸ್ಟ್‌ನಲ್ಲಿ ಪೊಲೀಸರನ್ನು ಸಂಪರ್ಕಿಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ರಿಸೆಪ್ಷನ್‍ಗೂ ಮುನ್ನ ನವದಂಪತಿ ಶವವಾಗಿ ಪತ್ತೆ
ಮಹಿಳೆಯ ಪತಿ ಕೋರಿಕೆ ಮೇರೆಗೆ ಪೊಲೀಸರು, ಆರೋಗ್ಯ ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರ ತಂಡ ಮಂಗಳವಾರ ನಿವಾಸಕ್ಕೆ ತಲುಪಿ ಬಾಗಿಲು ಒಡೆದು ಮತ್ತು ಮಹಿಳೆ ಮತ್ತು ಆಕೆಯ 10 ವರ್ಷದ ಮಗನನ್ನು ರಕ್ಷಿಸಿದ್ದಾರೆ. ಪೊಲೀಸರು ಮತ್ತು ಆರೋಗ್ಯಾಧಿಕಾರಿಗಳು ಮನೆಯ ಒಳಗೆ ಹೋದಾಗ ಕೊಳಕು ಬಟ್ಟೆ, ತಲೆಗೂದಲು ರಾಶಿ, ಕಸ ಮತ್ತು ರಾಶಿ ಇಟ್ಟಿದ್ದ ದಿನಸಿ ದೃಶ್ಯಗಳು ಕಂಡುಬಂದಿದೆ. ರಕ್ಷಣೆ ಬೆನ್ನಲ್ಲೇ ತಾಯಿ-ಮಗ ಇಬ್ಬರನ್ನೂ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು.
ಮಹಿಳೆ ತನ್ನ ಮಗನ ತಲೆಗೂದಲನ್ನೂ ತಾನೇ ಕಟ್ ಮಾಡುತ್ತಿದ್ದರಂತೆ. ಮನೆಯಲ್ಲಿ ಗ್ಯಾಸ್ ಸ್ಟೌ ಬದಲು ಇಂಡಕ್ಷನ್ ಮೂಲಕ ಅಡುಗೆ ಮಾಡಲಾಗುತ್ತಿತ್ತು. 3 ವರ್ಷಗಳಿಂದ ಮನೆಯ ಕಸವನ್ನು ಕೂಡ ಹೊರಗೆ ಹಾಕಿರಲಿಲ್ಲ. ಈ ಅವಧಿಯಲ್ಲಿ ಯಾರೂ ಕೂಡ ಮನೆಗೆ ಭೇಟಿ ನೀಡಿರಲಿಲ್ಲ. ಬಾಲಕ ಮನೆಯ ಗೋಡೆಗಳ ಮೇಲೆ ಪೇಂಟಿಂಗ್ ಮಾಡುತ್ತಿದ್ದ. ಆಘಾತಕಾರಿ ಸಂಗತಿಯೆಂದರೆ, ಮಹಿಳೆಯ ಮಗ ಕಳೆದ ಮೂರು ವರ್ಷಗಳಿಂದ ಸೂರ್ಯನನ್ನೇ ನೋಡಿರಲಿಲ್ಲ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ದೆಹಲಿ ಪಾಲಿಕೆ ಚುಕ್ಕಾಣಿ ಹಿಡಿದ ಆಮ್ ಆದ್ಮಿ – ಶೆಲ್ಲಿ ಒಬೆರಾಯ್ ಮೇಯರ್ ಆಗಿ ಆಯ್ಕೆ
ಇಷ್ಟೆಲ್ಲಾ ಆದರೂ ಇಬ್ಬರೂ ಮನೆಗೆ ಬೀಗ ಹಾಕಿರುವ ಬಗ್ಗೆ ಅಕ್ಕಪಕ್ಕದವರಿಗೆ ಸುಳಿವೇ ಸಿಕ್ಕಿರಲಿಲ್ಲ. ಕೋವಿಡ್-19 ಕಾರಣದಿಂದಾಗಿ ಮಹಿಳೆ ಭಯಭೀತರಾಗಿದ್ದರು. ಮನೆಯಿಂದ ಹೊರಗಡೆ ಹೋದರೆ ಮಗ ಮತ್ತು ತಾನು ಸಾಯಬಹುದು ಎಂಬ ಭೀತಿಯಿಂದ ಸತತ 3 ವರ್ಷ ಮನೆಯಲ್ಲೇ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಮಹಿಳೆ ತನ್ನ ಪತಿಯನ್ನು ಸಹ ಮನೆಯೊಳಗೆ ಬಿಟ್ಟುಕೊಂಡಿರಲಿಲ್ಲ. 2020ರಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಆಕೆ ಪತಿ ಕಚೇರಿ ಕೆಲಸಕ್ಕಾಗಿ ಮನೆಯಿಂದ ಹೊರಬಂದಿದ್ದರು. ಅದಾದ ಬಳಿಕ ಆತನನ್ನೂ ಮಹಿಳೆ ಮನೆಗೆ ಬಿಟ್ಟುಕೊಂಡಿರಲಿಲ್ಲ. ಮಾಝಿ ತನ್ನ ಪತ್ನಿಯೊಂದಿಗೆ ವೀಡಿಯೋ ಕರೆಗಳ ಮೂಲಕ ಸಂಪರ್ಕದಲ್ಲಿದ್ದ. ಮನೆಯ ತಿಂಗಳ ಬಾಡಿಗೆ ಕಟ್ಟುವುದು, ವಿದ್ಯುತ್ ಬಿಲ್ ಕಟ್ಟುವುದು, ಮಗನ ಶಾಲಾ ಶುಲ್ಕ ಕಟ್ಟುವುದು, ದಿನಸಿ ಸಾಮಾನು, ತರಕಾರಿ ಕೊಂಡುಕೊಳ್ಳುವುದು, ಪಡಿತರ ಚೀಲಗಳನ್ನು ಬಾಗಿಲಿನ ಹೊರಗಿಟ್ಟು ಹೋಗಬೇಕಾಗಿತ್ತು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k