– ಎರಡನೇ ಕೊರೊನಾ ಸೋಂಕಿತ ಪ್ರಕರಣ ವರದಿ
– ವೆಂಟಿಲೇಟರ್ ಕೊರತೆಯಿಂದ ಓರ್ವ ವ್ಯಕ್ತಿ ಸಾವು
ಮುಂಬೈ: ಸುಮಾರು 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ, ಏಷ್ಯಾದ ಅತಿ ದೊಡ್ಡ ಸ್ಲಂ ಎನಿಸಿಕೊಂಡಿರುವ ಧಾರಾವಿಯಲ್ಲಿ ಎರಡನೇ ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ.
52 ವರ್ಷದ ಬಿಎಂಸಿ(ಬೃಹನ್‍ಮುಂಬೈ ಮುನಿಸಿಪಲ್ ಕಾರ್ಪೋರೇಶನ್) ಸ್ಯಾನಿಟೈಸೇಶನ್ ಕೆಲಸಗಾರನಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈತ ವರ್ಲಿ ಪ್ರದೇಶದ ನಿವಾಸಿಯಾಗಿದ್ದು, ಇತ್ತೀಚೆಗೆ ಧಾರಾವಿಯಲ್ಲಿ ಕೆಲಸ ಮಾಡಲು ವರ್ಗಾಯಿಸಲಾಗಿತ್ತು. ವ್ಯಕ್ತಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದ ಹಿನ್ನೆಲೆ ಬಿಎಂಸಿ ಅಧಿಕಾರಿಗಳು ಆತನಿಗೆ ಪರೀಕ್ಷೆ ಮಾಡಿಸುವಂತೆ ಸೂಚಿಸಿದ್ದರು. ಸದ್ಯ ರೋಗಿ ಸ್ಥಿತಿ ಸ್ಥಿರವಾಗಿದೆ. ಆದರೆ ಆತನ ಕುಟುಂಬ ಹಾಗೂ ಆತನ ಜೊತೆಗೆ ಕೆಲಸ ಮಾಡುತ್ತಿದ್ದ 23 ಮಂದಿಯನ್ನು ಗೃಹಬಂಧನದಲ್ಲಿ ಇರುವಂತೆ ಸೂಚಿಸಲಾಗಿದೆ.
Advertisement
Advertisement
ಬುಧವಾರ ಧಾರಾವಿಯ 46 ವರ್ಷದ ವ್ಯಕ್ತಿಯೋರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದನು. ಈ ಸುದ್ದಿ ತಿಳಿಯುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದೇ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣ ವರದಿಯಾಗಿದ್ದು ಆತಂಕವನ್ನು ಹೆಚ್ಚು ಮಾಡಿದೆ.
Advertisement
ರಾಜ್ಯ ಸರ್ಕಾರದ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ ಯೋಜನೆಯಲ್ಲಿ ಕಟ್ಟಿಕೊಟ್ಟಿದ್ದ ಕಟ್ಟಡದಲ್ಲಿ ಮೃತ ವ್ಯಕ್ತಿ ವಾಸಿಸುತ್ತಿದ್ದನು. ಈ ವ್ಯಕ್ತಿ ಮೃತಪಟ್ಟ ಬಳಿಕ ಇಡೀ ಕಟ್ಟಡದಲ್ಲಿದ್ದ ಎಲ್ಲಾ ಮಂದಿಯನ್ನು ಕ್ವಾರಂಟೈನ್ ಮಾಡಿ, ನಿಗಾ ಇಡಲಾಗಿದೆ. ಆದರೆ ಈ ವ್ಯಕ್ತಿ ವಿದೇಶ ಪ್ರಯಾಣ ಮಾಡಿರಲಿಲ್ಲ, ಸೋಂಕಿತರ ಜೊತೆ ಸಂಪರ್ಕದಲ್ಲಿಯೂ ಈತ ಇರಲಿಲ್ಲ. ಆದರೆ ಬುಧವಾರ ಸಿಯಾನ್ ಆಸ್ಪತ್ರೆಯಲ್ಲಿ ಸೋಂಕಿತ ಸಾವನ್ನಪ್ಪಿದ್ದನು.
Advertisement
ಮುಂಬೈನ ದೊಡ್ಡ ಹಾಗೂ ಹಳೆಯ ಸಿಯಾನ್ ಆಸ್ಪತ್ರೆಯಲ್ಲಿ ವೆಂಟಲೇಟರ್ ವ್ಯವಸ್ಥೆ ಇಲ್ಲದೆ ರೋಗಿ ಸಾವನ್ನಪ್ಪಿದ್ದಾನೆ. ಇದು ಕಷ್ಟಕರ ಪರಿಸ್ಥಿತಿ, ಈ ನಿರ್ಲಕ್ಷ್ಯಕ್ಕೆ ಯಾರನ್ನೂ ನಾನು ದೋಷಿಸುವುದಿಲ್ಲ. ಆದರೆ ಯಾರಾದರು ಈ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಎಂದು ಕಾಂಗ್ರೆಸ್ ನಾಯಕ ಸಂಜಯ್ ನಿರುಪಂ ಕಿಡಿಕಾರಿದ್ದಾರೆ.
ಈವರಗೆ ಮಹಾರಾಷ್ಟ್ರದಲ್ಲಿ 340 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ 180 ಮಂದಿ ಮುಂಬೈ ನಗರದ ವಿವಾಸಿಗಳಾಗಿದ್ದು, 12ಕ್ಕೂ ಹೆಚ್ಚಯ ಮಂದಿ ಸಾವನ್ನಪ್ಪಿದ್ದಾರೆ.