InternationalLatestMain Post

ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ – ವುಹಾನ್‍ನಲ್ಲಿ ವೈದ್ಯರ ಸಂಭ್ರಮ

– ತಾತ್ಕಾಲಿಕವಾಗಿ ತೆರೆದಿದ್ದ ಆಸ್ಪತ್ರೆ ಬಂದ್
– ಇಡೀ ಇಟಲಿ ದೇಶ ಸ್ತಬ್ಧ

ಬೀಜಿಂಗ್/ ರೋಮ್: “ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ. ನಮ್ಮ ಪ್ರಯತ್ನಕ್ಕೆ ಜಯ ಸಿಕ್ಕಿದೆ”. ಹೀಗೆ ಹೇಳಿಕೊಂಡು ಚೀನಾದ ವೈದ್ಯರು ಸಂಭ್ರಮಿಸಿದ್ದಾರೆ.

ಚೀನಾದಲ್ಲಿ ಕೋರೊನಾ ಆರ್ಭಟ ಸಂಪೂರ್ಣ ಕಡಿಮೆ ಆಗುತ್ತಿದೆ. ಕೊರೊನಾ ಕೇಂದ್ರ ಸ್ಥಳ ವುಹಾನ್ ನಲ್ಲಿ ತಾತ್ಕಾಲಿಕವಾಗಿ ನಿರ್ಮಾಣಗೊಂಡ ಆಸ್ಪತ್ರೆಯನ್ನು ಇಂದು ಮುಚ್ಚಲಾಗಿದೆ. ಕಳೆದ 34 ದಿನಗಳಿಂದ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿತ್ತು. ಚೀನಾದ 21 ಮೆಡಿಕಲ್ ತಂಡದ ಜೊತೆಗೆ 6 ಸ್ಥಳಿಯ ಮೆಡಿಕಲ್ ಕಾಲೇಜಿನ ಸದಸ್ಯರು ಕೊರೊನಾ ಪೀಡಿತರಿಗೆ 24*7 ಚಿಕಿತ್ಸೆ ನೀಡುತ್ತಿದ್ದರು.

ಈ ಆಸ್ಪತ್ರೆಗೆ ದಾಖಲಾಗಿದ್ದ ಬಹುತೇಕ ಮಂದಿ ಗುಣಮುಖರಾಗಿದ್ದಾರೆ. ಇನ್ನು ಕೆಲವರ ಆರೋಗ್ಯ ಚೇತರಿಕೆಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‍ವರ್ಕ್(ಸಿಜಿಟಿಎನ್) ವರದಿ ಮಾಡಿದೆ.  ಇದನ್ನೂ ಓದಿ: 10 ದಿನದಲ್ಲಿ 1 ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಗೊಂಡಿದ್ದು ಹೇಗೆ? ಚೀನಾದ ಜೈವಿಕ ಅಸ್ತ್ರ ಕೊರೋನಾ?

ನನ್ನ ತಂದೆ ಬದುಕುತ್ತಾರೆ ಎಂಬ ಆಸೆಯನ್ನು ಕಳೆದುಕೊಂಡಿದ್ದೆ. ಆದರೆ ವೈದ್ಯರ ಶ್ರಮದಿಂದ ತಂದೆಯನ್ನು ನಾನು ಮತ್ತೆ ನೋಡುತ್ತಿದ್ದೇನೆ ಎಂದು ಯುವತಿಯೊಬ್ಬಳು ಪ್ರತಿಕ್ರಿಯೆ ನೀಡಿದ್ದಾಳೆ. ಚೀನಾದಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗುತ್ತಿದ್ದು, ಇಲ್ಲಿಯವರೆಗೆ ವಿಶ್ವದಲ್ಲಿ 4 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಒಟ್ಟು 4,011 ಮಂದಿ ಮೃತಪಟ್ಟಿದ್ದು ಸೋಮವಾರ ಒಂದೇ ದಿನ ಚೀನಾದಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ. ಚೀನಾದಲ್ಲಿ 80,754 ಪ್ರಕರಣ ದಾಖಲಾಗಿದ್ದು 3,136 ಮಂದಿ ಮೃತಪಟ್ಟಿದ್ದಾರೆ.

ಚೀನಾದ ನಂತರ ಇಟಲಿ(9,172 ಪ್ರಕರಣ, 463 ಸಾವು), ದಕ್ಷಿಣ ಕೊರಿಯಾ(7,513 ಪ್ರಕರಣ, 54 ಸಾವು), ಇರಾನ್(7,161 ಪ್ರಕರಣ, 237 ಸಾವು), ಫ್ರಾನ್ಸ್(1,412 ಪ್ರಕರಣ, 25 ಸಾವು) ಅತಿ ಹೆಚ್ಚು ಸಾವು, ಪ್ರಕರಣಗಳು ದಾಖಲಾಗಿದೆ.

ಇಟಲಿಯಲ್ಲಿ ಕಳೆದ ತಿಂಗಳು ಚೀನಾದಲ್ಲಿ ಇದ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ಇಟಲಿ ದೇಶ ಸ್ತಬ್ಧವಾಗಿದೆ. ಮೊದಲು ಎರಡೂ ನಗರಗಳಿಗಷ್ಟೇ ಇದ್ದ ನಿರ್ಬಂಧ ಈಗ ಇಡೀ ದೇಶಕ್ಕೆ ವಿಸ್ತರಿಸಲಾಗಿದೆ. ಒಟ್ಟು ಆರು ಕೋಟಿ ಮಂದಿ ಗೃಹಬಂಧನದಲ್ಲಿ ಇದ್ದಂತಾಗಿದೆ. ಇಟಲಿಯಲ್ಲಿ ಕೊರೋನಾಗೆ ಒಟ್ಟು 463 ಮಂದಿ ಬಲಿ ಆಗಿದ್ದು, ಮೃತರಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಿದೆ.

ಇರಾನ್‍ನಲ್ಲಿ ಇವತ್ತು 54 ಮಂದಿ ಬಲಿ ಆಗಿದ್ದು, ಮೃತರ ಸಂಖ್ಯೆ 237ಕ್ಕೆ ಏರಿದೆ. ಕಳ್ಳಭಟ್ಟಿ ಕುಡಿದರೆ ಸೋಂಕು ಬರುವುದಿಲ್ಲ ಎನ್ನುವ ವದಂತಿ ನಂಬಿ, ಕಳ್ಳಭಟ್ಟಿ ಕುಡಿದು ಇರಾನ್‍ನಲ್ಲಿ 27ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್‍ನಲ್ಲಿ ಧರ್ಮಗುರುವೊಬ್ಬ ಮದ್ಯ ಸೇವಿಸಿ, ಕೊರೋನಾದಿಂದ ದೂರವಿರಿ ಎಂದು ಉಪನ್ಯಾಸ ನೀಡಿದ್ದಾನೆ. ಅದರಲ್ಲೂ ಮೆಕ್ಸಿಕೋದ ಕೊರೊನಾ ಬ್ರ್ಯಾಂಡ್ ಸೇವಿಸುವಂತೆ ಕರೆ ನೀಡಿದ್ದಾನೆ. ಇರಾನ್ ಜೈಲುಗಳಿಂದ 70 ಸಾವಿರಕ್ಕೂ ಹೆಚ್ಚು ಖೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ.

Leave a Reply

Your email address will not be published. Required fields are marked *

Back to top button