2019ರಲ್ಲಿ ಸಮುದ್ರದ ಅಲೆಯಂತೆ ಜಗತ್ತಿಗೆ ಅಪ್ಪಳಿಸಿದ ಕೋವಿಡ್ ಮಹಾಮಾರಿ ಅದೆಷ್ಟೋ ಜೀವಗಳನ್ನು ಬಲಿತೆಗೆದುಕೊಂಡಿತ್ತು. 3 ವರ್ಷಗಳ ಕಾಲ ಜಗತ್ತನ್ನು ಕಾಡಿದ್ದ ಕೋವಿಡ್ -19 ಮತ್ತೊಮ್ಮೆ ಏಷ್ಯಾದ ಕೆಲವು ಭಾಗಗಳಲ್ಲಿ ವೇಗವಾಗಿ ಹರಡುತ್ತಿದೆ. ಪ್ರಕರಣಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ವಿಶೇಷವಾಗಿ ಹಾಂಕಾಂಗ್ ಮತ್ತು ಸಿಂಗಾಪುರದಂತಹ ಹಣಕಾಸು ಪ್ರಮುಖ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದ ಎಚ್ಚೆತ್ತ ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಇದು ಹೊಸ ಅಲೆ ಎಂದು ದೃಢಪಡಿಸಿದ್ದಾರೆ. ಇದೀಗ ಈ ಮಹಾಮಾರಿ ಭಾರತಕ್ಕೂ ಕಾಲಿಟ್ಟಿದೆ. ಹಾಗಿದ್ರೆ ಏನಿದು ಕೋವಿಡ್ ಹೊಸ ರೂಪ? ಭಾರತದಲ್ಲಿ ಇಲ್ಲಿವರೆಗೆ ದಾಖಲಾದ ಪ್ರಕರಣಗಳೆಷ್ಟು? ಈ ಬಗ್ಗೆ ತಜ್ಞರು ಹೇಳೋದೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಹಾಂಕಾಂಗ್, ಥಾಯ್ಲೆಂಡ್, ಸಿಂಗಾಪುರ, ಚೀನಾ ಸೇರಿದಂತೆ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಕೋವಿಡ್ ಸ್ಫೋಟಗೊಂಡಿದೆ. ಪ್ರತಿ ದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಆತಂಕದ ಬೆನ್ನಲ್ಲೇ ಕ್ರಿಕೆಟರ್ ಟ್ರಾವಿಸ್ ಹೆಡ್ ಹಾಗೂ 18ನೇ ಆವೃತ್ತಿ ಬಿಗ್ ಬಾಸ್ ಖ್ಯಾತಿಯ ಶಿಲ್ಪಾ ಶಿರೋಡ್ಕರ್ ಒಳಗೊಂಡಂತೆ ಅನೇಕರಲ್ಲಿ ಕೋವಿಡ್ ವೈರಸ್ ಕಾಣಿಸಿಕೊಂಡಿದೆ. ಪ್ರಸ್ತುತ ಭಾರತದಲ್ಲಿ 257 ಕೋವಿಡ್ ಪ್ರಕರಣಗಳು ದಾಖಲಾಗಿದೆ.
ಕಳೆದ ಕೆಲವು ವಾರಗಳಲ್ಲಿ ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದ ನಂತರ ಭಾರತವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಭಾರತದಲ್ಲಿರುವ ಬಹುತೇಕ ಪ್ರಕರಣಗಳು ಸೌಮ್ಯವಾಗಿವೆ, ತೀವ್ರವಾಗುವ ಯಾವ ಲಕ್ಷಣಗಳೂ ಗೋಚರಿಸುವುದಿಲ್ಲ. ದೇಶದ ದೊಡ್ಡ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಆಲೋಚಿಸಿದರೆ ಭಾರತದಲ್ಲಿ ಪ್ರಸ್ತುತ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ. ಈ ಎಲ್ಲಾ ಪ್ರಕರಣಗಳು ಸೌಮ್ಯವಾಗಿದ್ದು, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಪ್ರಕರಣಗಳ ಪ್ರಮಾಣ ಹೆಚ್ಚಿದೆ. ಕಳೆದ ವಾರದಲ್ಲಿ ಕೇರಳದಲ್ಲಿ 69 ಹೊಸ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 44 ಮತ್ತು ತಮಿಳುನಾಡು 34 ಹೊಸ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿಯೂ ಎರಡು ಸಾವುಗಳು ವರದಿಯಾಗಿವೆ. ವೈದ್ಯರ ಪ್ರಕಾರ, ಇವು ಕೋವಿಡ್ -19 ಸಾವುಗಳಲ್ಲ, ಆದರೆ ಇಬ್ಬರೂ ರೋಗಿಗಳಿಗೂ ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದಿದೆ.
ಸನ್‌ರೈಸರ್ಸ್ ಹೈದರಾಬಾದ್‌ನ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕು ದೃಢವಾಗಿದ್ದರಿಂದ ಅವರು ಸೋಮವಾರ ಲಕ್ನೋದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ.
ಅಲ್ಲದೇ ನಟಿ ಶಿಲ್ಪಾ ಶಿರೋಧ್ಕರ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ತಮಗೆ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ, ‘ನಮಸ್ಕಾರ ಜನರೇ! ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ನೀವು ಮಾಸ್ಕ್ ಧರಿಸಿ ಸುರಕ್ಷಿತರಾಗಿರಿ ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆ, ಕೋವಿಡ್ ಆತಂಕ ಹೆಚ್ಚಾಗುತ್ತಿದ್ದು, ಈಗಾಗಲೇ ಸಿಂಗಾಪುರ ಮತ್ತು ಹಾಂಕಾಂಗ್‌ನಲ್ಲಿ ಅಲರ್ಟ್ ಘೋಷಿಸಲಾಗಿದೆ. ಸಿಂಗಾಪುರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮೇ 03ರಿಂದ ಇಲ್ಲಿಯವರೆಗೂ 14,200 ಕೇಸ್ ದಾಖಲಾಗಿದ್ದು, ಅದರ ಹಿಂದಿನ ವಾರಕ್ಕಿಂತ ಶೇ.28ರಷ್ಟು ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಸುಮಾರು ಶೇ.30ರಷ್ಟು ಹೆಚ್ಚಾಗಿದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ತಿಳಿಸಿದೆ. ಉಲ್ಬಣವಾಗುತ್ತಿರುವ ಈ ಮಹಾಮಾರಿಯನ್ನು ಒಮಿಕ್ರಾನ್ ಉಪತಳಿಯಾದ JN.1 ವೈರಸ್ ಎಂದು ಗುರುತಿಸಲಾಗಿದೆ.
ಏನಿದು JN.1 ವೈರಸ್?
JN.1 ಕೋವಿಡ್ ವೈರಸ್ 2023ರ ಆಗಸ್ಟ್ ತಿಂಗಳಲ್ಲಿ ಸದ್ದು ಮಾಡಿದ ಕೋವಿಡ್ ಒಮಿಕ್ರಾನ್ ವೇರಿಯೆಂಟ್‌ನ BA.2.86 ರೂಪಾಂತರ ತಳಿಯಾಗಿದೆ. ಈ ಒಮಿಕ್ರಾನ್ ವೈರಸ್ ಬರೋಬ್ಬರಿ 30 ರೂಪಾಂತರಗೊಳ್ಳುವ ಸಾಮರ್ಥ್ಯ ಹೊಂದಿದೆ. ಈ 30 ರೂಪಾಂತರಗಳಲ್ಲಿ ಇದೀಗ ಕಾಣಿಸಿಕೊಂಡ JN.1 ತಳಿ ಒಂದಾಗಿದೆ.
ತಜ್ಞರು ಹೇಳೋದೇನು?
ಮೆರಿಲ್ಯಾಂಡ್‌ನ ಜಾನ್ ಹಾಪ್‌ಕಿನ್ಸ ವಿಶ್ವವಿದ್ಯಾಲಯದ ಪ್ರಕಾರ, JN.1 ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ವೇಗ ಹೆಚ್ಚು. ಇದು ಮತ್ತೊಂದು ರೂಪಾಂತರಗೊಳ್ಳುವ ಸಾಧ್ಯತೆಯೂ ಇದೆ. ಸದ್ಯ ಹರಡತ್ತಿರುವ JN.1 ವೈರಸ್ ಹೆಚ್ಚು ಪರಿಣಾಮಕಾರಿಯಾಗಿದೆ. ಅತೀ ಬೇಗದಲ್ಲಿ ಮನುಷ್ಯನ ಪ್ರತಿರೋಧ ಶಕ್ತಿಯನ್ನು ಕುಗ್ಗಿಸಿ ಆರೋಗ್ಯವಂತರನ್ನು ಅನಾರೋಗ್ಯಪೀಡಿತರನ್ನಾಗಿ ಮಾಡಲಿದೆ. ಹೀಗಾಗಿ ಮುಂಜಾಗ್ರತೆ ಅತೀ ಅವಶ್ಯಕ ಎಂದು ಅಧ್ಯಯನ ವರದಿ ಹೇಳುತ್ತದೆ.
ರೋಗ ಲಕ್ಷಣಗಳೇನು?
JN.1 ವೈರಸ್ ತಳಿಯ ರೋಗ ಲಕ್ಷಣದಲ್ಲಿ ಹೊಸತನವಿಲ್ಲ. ಕೋವಿಡ್ 19 ರೋಗ ಲಕ್ಷಣಗಳೇ ಇಲ್ಲೂ ಪ್ರಧಾನ.
– ಗಂಟಲು ನೋವು
– ವಿಪರೀತ ಶೀತ, ಕೆಮ್ಮು,
– ಜ್ವರ, ತಲೆನೋವು, ಮೈಕೈ ನೋವು
-ಸುಸ್ತು, ಉಸಿರಾಟದ ಸಮಸ್ಯೆ, ಆಹಾರ ವಸ್ತುಗಳ ರುಚಿ, ವಾಸನೆ ತಿಳಿಯದಿರುವುದು
-ನಿರ್ಜಲೀಕರಣ ಸಮಸ್ಯೆ
ಮೈಲ್ಡ್ ಪ್ರಕರಣಗಳಿಗೆ ಮನೆಯಲ್ಲಿ ಕ್ವಾರಂಟೈನ್ ಆಗುವುದು ಉತ್ತಮ. ಆದರೆ ಉಸಿರಾಟ, ತೀವ್ರ ಸುಸ್ತು ಕಾಣಿಸಿಕೊಂಡರೆ ಆಸ್ಪತ್ರೆ ದಾಖಲಾಗುವುದ ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.
ಯಾರಿಗೆ ಬೇಗ ಹರಡುತ್ತದೆ?
ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ಯಾರಿಗೆ ಬೇಕಾದರೂ ಈ ಸೋಂಕು ಕಾಣಿಸಿಕೊಳ್ಳಬಹುದು. ಮೊದಲೇ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಕೂಡ ಬರಬಹುದಾಗಿದೆ. ವೈದ್ಯರು ಹೇಳುವ ಹಾಗೆ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಈ ಋತುವಿನಲ್ಲಿ ಹರಡಬಹುದಾಗಿದೆ. ಹೀಗಾಗಿ ಸಿಂಗಪುರದಲ್ಲಿ ಜನರಿಗೆ ಬೂಸ್ಟರ್ ಡೋಸ್ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ.
ಇತ್ತೀಚಿನ ಕೆಲ ವರ್ಷಗಳಲ್ಲಿ ಹಲವು ರೂಪಾಂತರ ಕೋವಿಡ್ ವೈರಸ್ ಕಾಣಿಸಿಕೊಂಡಿದೆ. ಆದರೆ ಇದ್ಯಾವುದು ಭಾರತದಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ. ಆದರೆ ಈ ಬಾರಿ ಕಾಣಿಸಿಕೊಂಡಿರುವ JN.1 ವೈರಸ್ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಆತಂಕ ಹೆಚ್ಚಿಸಿದೆ. ಇದು ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.