ಚಿಕ್ಕಮಗಳೂರು: ಹಾಸನಾಂಬೆ ದೇವಿ (Hasanamba Devi) ದರ್ಶನಕ್ಕೆ ಹೊರಟ್ಟಿದ್ದ ದಂಪತಿಯ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾಗಿ ಪತ್ನಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಚಿಕ್ಕಮಗಳೂರು (Chikkamagaluru) ತಾಲೂಕಿನ ಗವನಹಳ್ಳಿ ಗ್ರಾಮದ ನಿವಾಸಿ ವನಿತಾ (38) ಗುರುತಿಸಲಾಗಿದೆ. ಪತ್ನಿ ವನಿತಾ ಅಪಘಾತದಲ್ಲಿ ಸಾವನ್ನಪ್ಪಿದ್ದು, ಪತಿ ಮಂಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದನ್ನೂ ಓದಿ: 5 ತಿಂಗಳ ಬಳಿಕ ಜೈಲಿಂದ ದರ್ಶನ್ ರಿಲೀಸ್ – ಹೈಕೋರ್ಟ್‌ನಿಂದ ಜಾಮೀನು ಮಂಜೂರು
ಇಂದು (ಅ.30) ಬೆಳಗಿನ ಜಾವ ನಾಲ್ಕು ಗಂಟೆಗೆ ಚಿಕ್ಕಮಗಳೂರಿನಿಂದ ಹಾಸನದ ಹಾಸನಾಂಬೆ ದೇವಿ ದರ್ಶನಕ್ಕೆ ಹೊರಟಿದ್ದ ಮಂಜು-ವನಿತಾ ದಂಪತಿಯ ಕಾರು ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾಗಿದೆ.
ಕೂಡಲೇ ಗ್ರಾಮಸ್ಥರು ಇಬ್ಬರನ್ನು ಬದುಕಿಸಲು ಹರಸಾಹಸಪಟ್ಟಿದ್ದಾರೆ. ಬೆಳಗಿನ ಜಾವದ ಕತ್ತಲಲ್ಲು ಕೂಡ ಕಲ್ಕೆರೆ ಗ್ರಾಮಸ್ಥರು ಕೆರೆಗೆ ಇಳಿದು ಕಾರಿಗೆ ಹಗ್ಗ ಕಟ್ಟಿ ಎಳೆದಿದ್ದಾರೆ. ಕಾರಿನ ಚಾಲಕ ಮಂಜು ಪ್ರಾಣಾಪಾಯದಿಂದ ಪಾರಾಗಿದ್ದು, ಮಂಜು ಪತ್ನಿ ವನಿತಾ ಸಾವನ್ನಪ್ಪಿದ್ದಾರೆ. ಕಾರಿನಿಂದ ಮಹಿಳೆಯನ್ನು ಹೊರತಂತ ಗ್ರಾಮಸ್ಥರು ಅವರನ್ನ ಬದುಕಿಸಲು ತೀವ್ರ ಹರಸಾಹಸಪಟ್ಟಿದ್ದಾರೆ. ಎದೆ ಬಡಿದು, ಬಾಯಿಗೆ ಉಸಿರು ನೀಡಿ, ಕೈಕಾಲು ಉಜ್ಜಿ ಜೀವ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ, ಕಾರು ಕೆರೆಯಲ್ಲಿ ಮುಳುಗಿ ನೀರು ಕುಡಿದಿದ್ದ ವನಿತಾ ಉಸಿರುಗಟ್ಡಿ ಸಾವನ್ನಪ್ಪಿದ್ದಾರೆ.
ಬೇಲೂರು (Beluru) ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Hyderabad | ಮಗನ ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಅಂಧ ದಂಪತಿ