ವಿಡಿಯೋ ಮಾಡಿಟ್ಟು ದಂಪತಿ ಆತ್ಮಹತ್ಯೆಗೆ ಯತ್ನ – ಪತಿ ಸಾವು, ಪತ್ನಿ ಗಂಭೀರ

Public TV
2 Min Read
CTD

ಚಿತ್ರದುರ್ಗ: ಆತ್ಮಹತ್ಯೆಗೆ ನಿರ್ಧರಿಸಿ ವಿಡಿಯೋ ವೈರಲ್ ಮಾಡಿ ನಾಪತ್ತೆಯಾಗಿದ್ದ ದಂಪತಿ ಕೊನೆಗೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಪತಿ ಸಾವನ್ನಪ್ಪಿದ್ದಾರೆ.  ಈ ಘಟನೆ ಜಿಲ್ಲೆಯ ಹೊಸದುರ್ಗದಲ್ಲಿ ನಡೆದಿದೆ.

ಮೈಲಾರಪ್ಪ ಮೃತ ವ್ಯಕ್ತಿ. ಘಟನೆಯಿಂದಾಗಿ ಪತ್ನಿ ಸರೋಜಮ್ಮ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಂಪತಿ ಗುರುವಾರ ಸಂಜೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ದಂಪತಿಯ ಹುಡುಕಾಟವನ್ನು ಮಾಡಿದ್ದಾರೆ. ಆದರೆ ಕತ್ತಲಾಗಿದ್ದರಿಂದ ದಂಪತಿ ಎಲ್ಲೂ ಪತ್ತೆಯಾಗಿಲ್ಲ.

love 1

ದಂಪತಿ ವಿಡಿಯೋ ಮಾಡಿದ ಬಳಿಕ ಹೊಸದುರ್ಗ ತಾಲೂಕಿನ ತೊಣಚೇನಹಳ್ಳಿ ಬಳಿ ದೇವಾಲಯವೊಂದರ ಸಮೀಪದಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇಂದು ಮುಂಜಾನೆ ಗ್ರಾಮಸ್ಥರು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಅಷ್ಟರಲ್ಲಿ ಪತಿ ಮೈಲಾರಪ್ಪ ಮೃತಪಟ್ಟಿದ್ದರು. ಪತ್ನಿ ಸರೋಜಮ್ಮ ಗಂಭೀರವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಡಿಯೋದಲ್ಲಿ ಏನಿದೆ?
ನಾನು ವಿವಾಹವಾಗಿ 13 ವರ್ಷವಾಗಿದೆ. ಹೊಸದುರ್ಗ ತಾಲೂಕಿನ ಕೊಂಡಾಪುರ ಗ್ರಾಮದಲ್ಲಿ ನಾನು ಕೆಎಸ್ಆರ್‌ಟಿಸಿ ಚಾಲಕ ಕಂ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೆ. ಅದೇ ಗ್ರಾಮದ ವಿನಯ್, ನನ್ನ ಪತ್ನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಆದರೆ ನನ್ನ ಪತ್ನಿ ಯಾವುದಕ್ಕೂ ಸ್ಪಂದಿಸಿಲ್ಲ. ಈ ಘಟನೆಯಲ್ಲಿ ನನ್ನ ಪತ್ನಿಯ ತಪ್ಪಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡಲು ಹೋದೆ. ಆದರೆ ಅವರ ಮಾವ ಪಿಎಸ್‍ಐ ಆಗಿದ್ದರಿಂದ ನಮಗೆ ಪೊಲೀಸರು ಸ್ಪಂದಿಸಿಲ್ಲ.

Capture 8

ವಿನಯ್

ನನ್ನ ಪತ್ನಿ ಸ್ಪಂದಿಸದೆ ಇದ್ದುದ್ದಕ್ಕೆ ವಿನಯ್ ಇಷ್ಟು ಕಿರುಕುಳ ನೀಡಿದ್ದಾನೆ. ಇದರಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮಗೆ ಆದ ರೀತಿಯಲ್ಲಿ ಯಾರಿಗೂ ಆಗಬಾರದು ಎಂದು ಹೇಳಿದ್ದಾರೆ. ಆರೋಪಿ ವಿನಯ್ ಪೋಷಕರು ನಿನಗೆ ಐದು ಲಕ್ಷ ಹಣ ಕೊಡುತ್ತೇನೆ ದೂರು ವಾಪಸ್ ತೆಗೆದುಕೋ. ಇಲ್ಲವಾದರೇ ಕೊಲೆ ಮಾಡುತ್ತೇವೆ ಎಂದು ನೇರವಾಗಿ ಬಂದು ಬೆದರಿಕೆ ಹಾಕಿದ್ದಾರೆ. ಇದರಿಂದ ನಾವು ಹೊಸದುರ್ಗ ಠಾಣೆಯಲ್ಲಿ ದೂರು ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

POLICE A

ಪತ್ನಿ ಹೇಳಿದ್ದೇನೆ?
ವಿನಯ್ ನನ್ನ ಬಗ್ಗೆ ಅಪಪ್ರಚಾರ ಮಾಡಿದರೂ ಪತಿ ನನ್ನ ಬಗ್ಗೆ ಅನುಮಾನ ಪಟ್ಟಿಲ್ಲ. ನಮ್ಮಿಬ್ಬರ ದಾಂಪತ್ಯದಲ್ಲಿ ಅಷ್ಟು ನಂಬಿಕೆ ಇತ್ತು. ಆದರೆ ಆತ ಗ್ರಾಮದಲ್ಲಿ ನಮ್ಮಿಬ್ಬರ ಬಗ್ಗೆ ಅಪಪ್ರಚಾರ ಮಾಡಿದ್ದಾನೆ. ಹೀಗಾಗಿ ನಂಬಿಕೆ ಇಲ್ಲದ ಜೀವನ ನಮಗೆ ಬೇಡ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ರೀತಿ ಬೇರೆಯವರಿಗೆ ತೊಂದರೆಯಾಗಬಾರದು. ನಮಗೆ ನ್ಯಾಯ ಸಿಗಬೇಕು. ಮದುವೆಯಾದಾಗಲೂ ಒಟ್ಟಿಗೆ ಜೀವನ ನಡೆಸುತ್ತೇನೆ ಎಂದು ಮಾತು ಕೊಟ್ಟಿದ್ದೆ. ಹೀಗಾಗಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಯಾಕಂದ್ರೆ ಮುಂದೆ ಸ್ವರ್ಗದಲ್ಲಾದರೂ ಇದೇ ದಾಂಪತ್ಯ ಜೀವನವನ್ನು ನಾನು ನನ್ನ ಪತಿ ಅನುಭವಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸಂಬಂಧ ಹೊಸದುರ್ಗ ಠಾಣೆ ಪೋಲಿಸರು ಪ್ರಕರಣ ಧಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ

Share This Article
Leave a Comment

Leave a Reply

Your email address will not be published. Required fields are marked *