ಅರುಣ್ ಅಮುಕ್ತ (Arun Amukta) ನಿರ್ದೇಶನದ `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ (Vidyarthi Vidyarthiniyare) ಹಂತ ಹಂತವಾಗಿ, ಕ್ರಿಯಾಶೀಲ ಹಾದಿಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಾ ಮುಂದುವರೆಯುತ್ತಿದೆ. ಸದ್ಯದ ಮಟ್ಟಿಗೆ ಬಿಡುಗಡೆಗೆ ತಯಾರಾಗುತ್ತಿರುವ ಈ ಸಿನಿಮಾ ಸುತ್ತ ಸಕಾರಾತ್ಮಕ ವಾತಾವರಣ ಹಬ್ಬಿಕೊಂಡಿದೆ. ಆ ಖುಷಿಯಲ್ಲಿರುವ ಚಿತ್ರತಂಡವೀಗ `ಬ್ಯಾಡ್ ಬಾಯ್ಸ್’ (Bad Boys) ಎಂಬ ವೀಡಿಯೋ ಸಾಂಗ್ ಒಂದನ್ನು ಬಿಡುಗಡೆಗೊಳಿಸಿದೆ. ಅದಾಗಿ ವಾರ ಕಳೆಯೋದರೊಳಗಾಗಿ ಎಲ್ಲೆಡೆಯಿಂದ ಈ ಹಾಡಿನ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಈ ಹೊತ್ತಿನ ಯುವ ಸಮುದಾಯವನ್ನು ಒಂದೇ ಸಲಕ್ಕೆ ಆವರಿಸಿಕೊಳ್ಳುವ ಶೈಲಿಯ ಈ ಹಾಡೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಲೇ, ಹೆಚ್ಚೆಚ್ಚು ವೀಕ್ಷಣೆ ಪಡೆಯುತ್ತಾ ಮುಂದುವರೆಯುತ್ತಿದೆ.
ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಎಂಬ ಶೀರ್ಷಿಕೆಯೇ ಇದೊಂದು ಯುವ ಆವೇಗದ ಕಥಾನಕವನ್ನೊಳಗೊಂಡಿರುವ ಚಿತ್ರವೆಂಬುದನ್ನು ಸಾರಿ ಹೇಳುವಂತಿದೆ. ಇದೀಗ ಬಿಡುಗಡೆಗೊಂಡಿರುವ ಬ್ಯಾಡ್ ಬಾಯ್ಸ್ ವೀಡಿಯೋ ಸಾಂಗ್ ಶೀರ್ಷಿಕೆಗೆ ಅನ್ವರ್ಥವೆಂಬಂತಿದೆ. ಸಾಹಿತ್ಯ, ತಾಂತ್ರಿಕತೆ ಸೇರಿದಂತೆ ಎಲ್ಲ ರೀತಿಯಿಂದಲೂ ಹೊಸತೆಂಬಂತೆ ಮೂಡಿಬಂದಿರುವ ಈ ಹಾಡಿಗೆ ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಭರ್ಜರಿ ಚೇತನ್ ಕುಮಾರ್ ಸಾಹಿತ್ಯ ಒದಗಿಸಿರುವ ಈ ಹಾಡು, ವಿಜೇತ್ ಕೃಷ್ಣ, ಕೀರ್ತನಾ ಚಂದ್ರು ಮತ್ತು ಸುನೈನಾ ಕಂಠಸಿರಿಯಲ್ಲಿ ಮೂಡಿ ಬಂದಿದೆ.
- Advertisement
- Advertisement
ಯುವ ಸಮುದಾಯಕ್ಕೆ ಹಿಡಿಸುವಂತೆ ಮೂಡಿ ಬಂದಿರುವ ಈ ಹಾಡನ್ನು ತಾಂತ್ರಿಕವಾಗಿಯೂ ವಿಶೇಷತೆಗಳೊಂದಿಗೆ ರೂಪಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಂಡಿದೆ. ಇದೀಗ ಇಡೀ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿ ಈ ಹಾಡಿಗೆ ಎಐ ಆನಿಮೇಷನ್ ನಡೆಸಲಾಗಿದೆ. ಇದಕ್ಕೆ ಸಿನಿಮಾ ಪ್ರೇಮಿಗಳ ಕಡೆಯಿಂದ ಪ್ರತಿಕ್ರಿಯೆ ಹೇಗಿರಬಹುದೆಂಬ ಕುತೂಹಲ ಚಿತ್ರತಂಡದಲ್ಲಿತ್ತು. ಈಗ ಮೂಡಿಕೊಂಡಿರುವ ಭರಪೂರ ಮೆಚ್ಚುಗೆಯಲ್ಲಿ ಚಿತ್ರತಂಡದ ಶ್ರಮ ಸಾರ್ಥಕ್ಯ ಕಂಡಿದೆ.
ಇದೀಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿರುವ ಈ ಹಾಡಿನಲ್ಲಿ ಮನೋಜ್ ವಿವಾನ್, ಮನಸ್ವಿ, ಭಾವನಾ ಅಪ್ಪು, ಅಮರ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕ, ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ ಅರುಣ್ ಸುರೇಶ್ ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಚಂದನ್ ಶೆಟ್ಟಿ , ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.