ದಾವಣಗೆರೆ: ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಸ್ವರ್ಗವನ್ನೇ ಧರೆಗಿಳಿಸುವ ಗಾಜಿನ ಅರಮನೆಯನ್ನ ಸಿಎಂ ಸಿದ್ದರಾಮಯ್ಯ ಇಂದು ಅನಾವರಣಗೊಳಿಸಲಿದ್ದಾರೆ.
ಕೆರೆಯ ದಡದಲ್ಲಿ ಸುಂದರವಾಗಿ ಕಾಣುತ್ತಿರುವ ಗಾಜಿನ ಮನೆ, ಲಾಲ್ ಬಾಗ್ ನಲ್ಲಿರುವ ಗ್ಲಾಸ್ ಹೌಸ್ ಅನ್ನೇ ನಾಚಿಸುವಂತೆ ರೆಡಿಯಾಗುತ್ತಿರುವ ಗಾಜಿನ ಸುಂದರಿ. ಇಡೀ ದೇಶಕ್ಕೆ ದೊಡ್ಡದು ಮತ್ತು ವಿಶಿಷ್ಟ ಎನ್ನಬಹುದಾದ ಲಕ್ಷಣಗಳನ್ನ ಈ ಗಾಜಿನ ಅರಮನೆ ಹೊಂದಿದೆ. ಇದು ನಿರ್ಮಾಣವಾಗಿರೋದು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ. ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕುಂದುವಾಡ ಕೆರೆ ಬಳಿ 108 ಮೀಟರ್ ಉದ್ದ, 68 ಮೀಟರ್ ಅಗಲ, 18 ಮೀಟರ್ ಎತ್ತರದಲ್ಲಿ ಗಾಜಿನ ಅರಮನೆ ನಿರ್ಮಾಣವಾಗಿದೆ.
2014-15 ನೇ ಸಾಲಿನಲ್ಲಿ ಶಾಮನೂರು ಶಿವಶಂಕರಪ್ಪ ಸಚಿವರಾಗಿದ್ದಾಗ 5 ಕೋಟಿ ರೂ. ವೆಚ್ಚದಲ್ಲಿ ಆರಂಭವಾದ ಕಾಮಗಾರಿ ಈಗ ಅಂದಾಜು 30 ಕೋಟಿ ರೂಪಾಯಿಗೆ ಬಂದು ತಲುಪಿದೆ. ಇದು ಬೆಂಗಳೂರಿನ ಲಾಲ್ ಬಾಗ್ ನಲ್ಲಿರುವ ಗ್ಲಾಸ್ ಹೌಸ್ ಗಿಂತ ದೊಡ್ಡದಾಗಿದೆ. ಅಲ್ಲದೆ ಇಡೀ ದೇಶದಲ್ಲೇ ಇದು ದೊಡ್ಡ ಅರಮನೆ ಎನ್ನಬಹುದಾಗಿದೆ.
ಗಾಜಿನ ಮನೆಗೆ 13.35 ರೂ. ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 1.50 ಕೋಟಿ ರೂ. ವೆಚ್ಚದಲ್ಲಿ ಗ್ರಾನೈಟ್, 1.99 ಕೋಟಿ ರೂ. ವೆಚ್ಚದಲ್ಲಿ ಕಾಂಪೌಂಡ್, 1.08 ಕೋಟಿ ರೂ. ವೆಚ್ಚದಲ್ಲಿ ತೋಟಗಾರಿಕೆ ಮಾಹಿತಿ ಕೇಂದ್ರ, ರಸ್ತೆ ನಿರ್ಮಾಣ, ಸುತ್ತಮುತ್ತ ವಿದೇಶಿ ಗಿಡಗಳನ್ನ ಬೆಳೆಸುವ ಜೊತೆ ಸುಂದರವಾದ ಉದ್ಯಾನವನ ನಿರ್ಮಾಣದ ಗುರಿ ಹೊಂದಲಾಗಿದೆ. ಇಂತಹ ಸುಂದರ ಸ್ಥಳವನ್ನ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.
ಒಟ್ಟಾರೆ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾದ ದಾವಣಗೆರೆಗೆ ಈ ಗಾಜಿನ ಅರಮನೆ ಮತ್ತೊಂದು ಗರಿಯನ್ನ ತಂದುಕೊಡಲಿದೆ. ಈ ಸುಂದರವಾದ ಅರಮನೆ ದೇಶ-ವಿದೇಶಿಗರನ್ನ ದಾವಣಗೆರೆಯತ್ತ ಸೆಳೆಯುವ ಜೊತೆಗೆ ಜಿಲ್ಲೆಯ ಹಿರಿಮೆಯನ್ನೂ ಹೆಚ್ಚಿಸಲಿದೆ.