ಫ್ಲೋರಿಡಾ: ನಾಸಾದ (NASA) ಐತಿಹಾಸಿಕ ಆರ್ಟೆಮಿಸ್-2(Artemis II) ಪಯಣಕ್ಕೆ ಕೌಂಟ್ಡೌನ್ ಶುರುವಾಗಿದೆ. ಮಾನವ ಸಹಿತ ಚಂದ್ರಯಾನ ನಿರೀಕ್ಷೆಯಂತೆಯೇ ಏಪ್ರಿಲ್ 1ಕ್ಕೆ ಉಡಾವಣೆಗೊಳ್ಳಲಿದೆ.
ಶೇ.80ರಷ್ಟು ಹವಾಮಾನ ಅನುಕೂಲವಾಗಿದ್ದರೂ ಸೂರ್ಯನಿಂದ(Sun) ವಿಕಿರಣಗಳು ಹೆಚ್ಚಾಗಿ ಬಿಡುಗಡೆಯಾಗುತ್ತಿರುವ ಕಾರಣ ನಾಸಾ ಈಗ ಸೂರ್ಯನ ಮೇಲೂ ಕಣ್ಣಿಟ್ಟಿದೆ. ತಾಂತ್ರಿಕವಾಗಿ ಯೋಜನೆಯಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ ಎಂದು ನಾಸಾ ತಿಳಿಸಿದೆ.
ಅಮೆರಿಕದ ಫ್ಲೋರಿಡಾದ ಕೆನಡಿ ಸ್ಪೇಸ್ ಸೆಂಟರ್ಗೆ(Kennedy Space Center) ಗಗನಯಾನಿಗಳು ತಲುಪಿದ್ದು ಹಾರಲು ಒರಾಯನ್ ನೌಕೆ ಸಜ್ಜಾಗಿದೆ. ಅಮೆರಿಕ ಕಾಲಮಾನ ಏಪ್ರಿಲ್ 1ರ ಸಂಜೆ 6:24ಕ್ಕೆ(ಭಾರತೀಯ ಕಾಲಮಾನ ಏ.2 ಬೆಳಗ್ಗೆ 3:54) ಸ್ಪೇಸ್ ಲಾಂಚ್ ಸಿಸ್ಟಮ್ (SLS) ಹೆಸರಿನ ರಾಕೆಟ್ ಮೂಲಕ ಒರಾಯನ್ ನಭಕ್ಕೆ ನಗೆಯಲಿದೆ.
ಒರಾಯನ್ ನೌಕೆಯಲ್ಲಿ (Orion Capsule) ಗಗನಯಾತ್ರಿಗಳು ಕುಳಿತು ಪ್ರಯಾಣ ಬೆಳೆಸಲಿದ್ದಾರೆ. ಇದು ಅತ್ಯಂತ ಸುರಕ್ಷಿತವಾಗಿದ್ದು, ನಾಲ್ವರು ಗಗನಯಾತ್ರಿಗಳನ್ನು ಚಂದ್ರನವರೆಗೆ ಕೊಂಡೊಯ್ಯುವ ಮತ್ತು ಸುರಕ್ಷಿತವಾಗಿ ಭೂಮಿಗೆ ಮರಳಿ ತರುವ ಸಾಮರ್ಥ್ಯ ಹೊಂದಿದೆ. 10 ದಿನಗಳ ಸುದೀರ್ಘ ಪ್ರಯಾಣದಲ್ಲಿ ಗಗನಯಾತ್ರಿಗಳು ಚಂದ್ರನನ್ನು ಸುತ್ತುಹಾಕಿ ಅಧ್ಯಯನ ನಡೆಸಿ ಭೂಮಿಗೆ ಮರಳಲಿದ್ದಾರೆ.

ಇಷ್ಟೊಂದು ಪ್ರಾಮುಖ್ಯತೆ ಯಾಕೆ?
1972ರಲ್ಲಿ ನಡೆದ ಅಪೊಲೊ 17 ಮಿಷನ್ ನಂತರ 54 ವರ್ಷಗಳ ಬಳಿಕ ಮಾನವಸಹಿತ ನೌಕೆ ಚಂದ್ರನತ್ತ ಪಯಣಸುತ್ತಿರುವುದರಿಂದ ಕುತೂಹಲ ಹೆಚ್ಚಾಗಿದೆ. ಚಂದ್ರನ ಮೇಲೆ ಸಂಶೋಧನೆ ನಡೆಸುವ ಮೂಲಕ ಮುಂದಿನ ದಿನಗಳಲ್ಲಿ ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸಲು ಬೇಕಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ನಾಸಾ ಹಾಕಿಕೊಂಡಿದೆ.
ಮುಖ್ಯ ಉದ್ದೇಶ ಏನು?
ಗಗನಯಾತ್ರಿಗಳೊಂದಿಗೆ ಒರಾಯನ್ (Orion) ನೌಕೆಯು ಬಾಹ್ಯಾಕಾಶದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅಲ್ಲಿನ ವಿಕಿರಣಗಳನ್ನು ಹೇಗೆ ತಡೆದುಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸುವುದು ಈ ಮಿಷನ್ನ ಗುರಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ಮಾನವರನ್ನು ಇಳಿಸುವ ಆರ್ಟೆಮಿಸ್-3 (Artemis III) ಯೋಜನೆಗೆ ಸಹಾಯವಾಗಲಿದೆ.
ಉಡಾವಣೆಗೂ ಮುನ್ನ ಸೂರ್ಯನ ಅಧ್ಯಯನ ಯಾಕೆ?
ಆರ್ಟೆಮಿಸ್ ಉಡಾವಣೆಗೂ ಮುನ್ನ ಮತ್ತು ಮಿಷನ್ ಸಮಯದಲ್ಲಿ ಸೌರ ವಿಕಿರಣದ (Solar Radiation) ಅಧ್ಯಯನ ಮಾಡುವುದು ಅತ್ಯಂತ ನಿರ್ಣಾಯಕವಾಗಿದೆ. ಭೂಮಿಯ ರಕ್ಷಣಾತ್ಮಕ ಕಾಂತಕ್ಷೇತ್ರವನ್ನು (Magnetic Field) ದಾಟಿ ಗಗನಯಾತ್ರಿಗಳು ಆಳವಾದ ಬಾಹ್ಯಾಕಾಶಕ್ಕೆ ಪ್ರಯಾಣಿಸುವುದರಿಂದ ಸೂರ್ಯನಿಂದ ಬರುವ ಅಪಾಯಕಾರಿ ಕಿರಣಗಳ ಬಗ್ಗೆ ನಿಗಾ ಇಡುವುದು ಅಗತ್ಯ.

ಸೂರ್ಯನು ಪ್ರಸ್ತುತ ತನ್ನ 11 ವರ್ಷಗಳ ಸೌರ ಚಕ್ರದ (Solar Cycle) ಅತಿ ಹೆಚ್ಚು ಸಕ್ರಿಯ ಹಂತದಲ್ಲಿದ್ದಾನೆ. ಈ ಸಮಯದಲ್ಲಿ ಸೌರ ಮಾರುತಗಳು ಮತ್ತು ಜ್ವಾಲೆಗಳು ಅಧಿಕವಾಗಿರುವುದರಿಂದ, ಉಡಾವಣೆಗೆ ಅತ್ಯಂತ ಸುರಕ್ಷಿತವಾದ ಸಮಯವನ್ನು ನಿರ್ಧರಿಸಲು ನಾಸಾ ಸೂರ್ಯನನ್ನು 24/7 ಮೇಲ್ವಿಚಾರಣೆ ಮಾಡುತ್ತಿದೆ.
ಸೂರ್ಯನಿಂದ ಹೊರಬರುವ ಅಧಿಕ ಶಕ್ತಿಯ ಕಣಗಳು (Solar Energetic Particles – SEPs) ಗಗನಯಾತ್ರಿಗಳ ದೇಹಕ್ಕೆ ಸೇರಿದರೆ ಕ್ಯಾನ್ಸರ್ ಅಥವಾ ಮೆದುಳಿನ ಕಾರ್ಯಕ್ಷಮತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ವಿಕಿರಣದ ಮುನ್ಸೂಚನೆ ಲಭ್ಯವಿದ್ದರೆ ಗಗನಯಾತ್ರಿಗಳು ನೌಕೆಯಲ್ಲಿರುವ ವಿಶೇಷ ಸುರಕ್ಷಿತ ಸ್ಥಳಗಳಲ್ಲಿ (Radiation Shelter) ಅಡಗಿಕೊಳ್ಳಬಹುದು.
ಸೌರ ವಿಕಿರಣವು ಬಾಹ್ಯಾಕಾಶ ನೌಕೆಯ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ವಿದ್ಯುತ್ ವ್ಯವಸ್ಥೆಯನ್ನು ಹಾನಿಗೊಳಿಸಬಹುದು. ಆರ್ಟೆಮಿಸ್-1 ಪರೀಕ್ಷೆಯ ವೇಳೆ ವಿಕಿರಣದಿಂದಾಗಿ ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಕೆಲವು ಅಸಹಜತೆಗಳು ಕಂಡುಬಂದಿದ್ದವು ಆದ್ದರಿಂದ ಇವುಗಳನ್ನು ತಡೆಯಲು ಅಧ್ಯಯನ ಅಗತ್ಯ.
ಗಗನಯಾತ್ರಿಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ವಿಕಿರಣ ಕವಚಗಳು (Radiation Shields) ಮತ್ತು ವಿಶೇಷ ಕವಚದ ಉಡುಪುಗಳು (AstroRad Vest) ಎಷ್ಟು ಪರಿಣಾಮಕಾರಿ ಎಂದು ತಿಳಿಯಲು ಈ ಅಧ್ಯಯನ ಸಹಾಯ ಮಾಡಲಿದೆ.
ನಾಸಾ ಈ ಕಾರ್ಯಕ್ಕಾಗಿ 2020 ರಲ್ಲಿ ಹಾರಿಸಿದ್ದ ಪರ್ಸೆವೆರೆನ್ಸ್ ರೋವರ್ (Mars Perseverance) ಮತ್ತು ವಿವಿಧ ಉಪಗ್ರಹಗಳ ಡೇಟಾವನ್ನು ಬಳಸಿಕೊಂಡು ಸೂರ್ಯನ ಮೇಲ್ಮೈಯಲ್ಲಿರುವ ಕಲೆಗಳನ್ನು (Sunspots) ಗಮನಿಸುತ್ತಿದೆ. ಇದು ಅಪಾಯಕಾರಿ ಸೌರ ಜ್ವಾಲೆಗಳ ಬಗ್ಗೆ ಎರಡು ವಾರ ಮುಂಚಿತವಾಗಿ ಎಚ್ಚರಿಕೆ ನೀಡಬಲ್ಲುದು.

ರಾಕೆಟ್ ವಿಶೇಷತೆ ಏನು?
ಉಡಾವಣಾ ಸಮಯದಲ್ಲಿ ಇಂಧನವನ್ನು ಪೂರ್ಣವಾಗಿ ತುಂಬಿದಾಗ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ಸುಮಾರು 26 ಲಕ್ಷ ಕೆಜಿ (2.6 ಮಿಲಿಯನ್ ಕೆಜಿ) ತೂಕವಿರುತ್ತದೆ. ಇಂಧನ ಇಲ್ಲದೇ ಇದ್ದಾಗ ಕೇವಲ ರಾಕೆಟ್ ಮತ್ತು ಒರಾಯನ್ ಕ್ಯಾಪ್ಸುಲ್ನ ತೂಕ ಸುಮಾರು 16 ಲಕ್ಷ ಕೆಜಿ ಇರುತ್ತದೆ. ಇದು ಸುಮಾರು 27,000 ಕೆಜಿ ತೂಕವನ್ನು ಚಂದ್ರನ ಕಕ್ಷೆಯವರೆಗೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.
ಈ ಬೃಹತ್ ರಾಕೆಟ್ ಅನ್ನು ಉಡಾವಣಾ ಸ್ಥಳಕ್ಕೆ ಸಾಗಿಸಲು ಸುಮಾರು 95 ಲಕ್ಷ ಕೆಜಿ ಭಾರ ಹೊರುವ ಸಾಮರ್ಥ್ಯವಿರುವ ‘ಕ್ರಾಲರ್-ಟ್ರಾನ್ಸ್ಪೋರ್ಟರ್’ ಎಂಬ ವಿಶೇಷ ವಾಹನವನ್ನು ಬಳಸಲಾಗುತ್ತದೆ. ಎಸ್ಎಲ್ಎಸ್ ವಿಶ್ವದ ಅತ್ಯಂತ ಶಕ್ತಿಶಾಲಿ ರಾಕೆಟ್ ಎಂದೇ ಪ್ರಸಿದ್ಧಿ ಪಡೆದಿದೆ. 2022ರಲ್ಲಿ ನಡೆದ ಆರ್ಟೆಮಿಸ್-1 (Artemis I) ಯಶಸ್ವಿ ಉಡಾವಣೆಯಲ್ಲಿ ಈ ರಾಕೆಟ್ ಅನ್ನು ಬಳಸಲಾಗಿತ್ತು.
Our Artemis II crew will be going around the Moon, but they’ll always find their way back home 🌎
During this complex journey, the four astronauts will travel ~685,000 miles on a trajectory around the Moon and back to Earth.
See their daily agenda: https://t.co/172PVtri2Z pic.twitter.com/zsK5i6pirj
— NASA Artemis (@NASAArtemis) March 25, 2026
ತಂಡದಲ್ಲಿ ಯಾರಿದ್ದಾರೆ?
ರೀಡ್ ವೈಸ್ಮನ್ (Reid Wiseman): ಮಿಷನ್ ಕಮಾಂಡರ್.
ವಿಕ್ಟರ್ ಗ್ಲೋವರ್ (Victor Glover): ಪೈಲಟ್ (ಚಂದ್ರನತ್ತ ಪ್ರಯಾಣಿಸುವ ಮೊದಲ ಕಪ್ಪು ವರ್ಣೀಯ ವ್ಯಕ್ತಿ).
ಕ್ರಿಸ್ಟಿನಾ ಕೋಚ್ (Christina Koch): ಮಿಷನ್ ಸ್ಪೆಷಲಿಸ್ಟ್ (ಚಂದ್ರನತ್ತ ಪ್ರಯಾಣಿಸುವ ಮೊದಲ ಮಹಿಳೆ).
ಜೆರೆಮಿ ಹ್ಯಾನ್ಸನ್ (Jeremy Hansen): ಮಿಷನ್ ಸ್ಪೆಷಲಿಸ್ಟ್ (ಕೆನಡಾ ಬಾಹ್ಯಾಕಾಶ ಸಂಸ್ಥೆ)

