ಮೈಸೂರು: ಜಿಲ್ಲೆಯಲ್ಲಿ ಇದೇ ತಿಂಗಳು ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಬಳಸುತ್ತಿರುವ ಕನ್ನಡ ತೇರು ನಕಲಿ ಅನ್ನೋ ಮಾತು ಕೇಳಿ ಬರುತ್ತಿದ್ದು, ಹಳೆ ರಥಕ್ಕೆ ಹೊಸ ಬಣ್ಣ ಬಳಿದು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಬಳಸುವ ಹಿನ್ನೆಲೆಯಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ರಥ ನಿರ್ಮಾಣ ಮಾಡಲಾಗಿತ್ತು. ಆದರೆ ಈ ರಥವು ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಶತಮಾನೋತ್ಸವಕ್ಕೆ ತಯಾರಿಸಲಾಗಿದ್ದ ರಥ ಎನ್ನಲಾಗಿದೆ. ಸುತ್ತೂರು ಮಠದ ರಥ ರೂಪಿಸಿದ ಕಲಾವಿದರೇ ಕನ್ನಡ ರಥ ರೂಪಿಸಿದ್ದು ತಾವು ಈ ಹಿಂದೆ ಮಾಡಿದ್ದ ರಥವನ್ನು ಬದಲಾಯಿಸಿ ಹೊಸ ಬಿಲ್ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಸುತ್ತೂರು ಮಠಕ್ಕೆ ರೂಪಿಸಲಾಗಿದ್ದ ರಥವನ್ನು ಕನ್ನಡ ರಥವಾಗಿ ಬದಲಾಯಿಸಲಾಗಿದೆ. ಹಳೆಯ ರಥದಲ್ಲಿ ಮುಂಭಾಗದಲ್ಲಿದ್ದ ನಂದಿಗಳು ಹೊಸ ರಥದಲ್ಲಿ ಹಿಂಭಾಗಕ್ಕೆ ಸ್ಥಳಾಂತರ ಮಾಡಲಾಗಿದೆ. ಅಲ್ಲದೇ ಹಿಂದೆ ಇದ್ದ ಜೋಡಿ ಆನೆಗಳು ಮುಂದಕ್ಕೆ ಸ್ಥಳಾಂತರವಾಗಿವೆ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪ್ರತಿಮೆ ಇದ್ದ ಸ್ಥಳಕ್ಕೆ ಪರದೆ ಬಿಟ್ಟು ಎರಡೂ ಕಡೆ ತಾಯಿ ಭುವನೇಶ್ವರಿಯ ಪ್ರತಿಮೆ ಹಾಕಿ ಹೊಸ ಬಣ್ಣ ಲೇಪಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.
ನವೆಂಬರ್ 24ರಿಂದ ಮೂರು ದಿನಗಳ ಕಾಲ ಮೈಸೂರಿನಲ್ಲಿ ನಡೆಯಲಿರುವ ಸಮ್ಮೇಳನದ ಪ್ರಚಾರಾರ್ಥವಾಗಿ ಮೂರು ದಿನಗಳಿಂದ ರಥ ಯಾತ್ರೆ ನಡೆಯುತ್ತಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಥಯಾತ್ರೆ ಆಯೋಜನೆ ಆಗಿದೆ.