ಬಡವರ ಬಂಧು ಸಾಲ ಮನ್ನಾ, ನರೇಗಾ ಕೂಲಿಕಾರ್ಮಿಕರಿಗೆ ಮುಂಗಡ ಹಣ- ಸಿಎಂ ಘೋಷಣೆ

Public TV
1 Min Read
bsy 1

ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ಬಡವರಿಗೆ ಹೊರೆ ಆಗದೇ ಇರಲು ರಾಜ್ಯ ಸರ್ಕಾರ ಹಲವು ಘೋಷಣೆಗಳನ್ನು ಪ್ರಕಟಿಸಿದೆ.

ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಕೋವಿಡ್ 19 ಮಹಾಮಾರಿ ಕಾಣಿಸಿಕೊಂಡಿದೆ. ಹೀಗಾಗಿ 2 ತಿಂಗಳ ಪಡಿತರ ಮುಂಚಿತವಾಗಿ ಕೊಡುತ್ತಿದ್ದೇವೆ. 13.20 ಕೋಟಿ ರೂ ಬಡವರ ಬಂಧು ಸಾಲ ಮನ್ನಾ ಮಾಡಲಾಗುವುದು. ಸಾಮಾಜಿಕ ಭದ್ರತಾ ಪಿಂಚಣಿ ಮುಂಗಡವಾಗಿ ಕೊಡುತ್ತೇವೆ. ನರೇಗಾ ಕೂಲಿಕಾರರಿಗೆ ಎರಡು ತಿಂಗಳ ಮುಂಗಡ ಹಣ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ವೈರಾಣು ನಿಯಂತ್ರಣಕ್ಕೆ ಸರ್ಕಾರವು ಶಕ್ತಿ ಮೀರಿ ಶ್ರಮಿಸುತ್ತಿದೆ. ಕೊರೊನಾಗೆ ದೇಶದಲ್ಲಿ ಮೊದಲ ಸಾವು ಕರ್ನಾಟಕದಲ್ಲೇ ಆಗಿದ್ದರೂ ಸೋಂಕು ಹರಡದಂತೆ ತಡೆದಿದ್ದೇವೆ. ನಮ್ಮ ಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಜನರು ಇಂತಹ ಪರಿಸ್ಥಿತಿಯಿಂದ ಬಹುಬೇಗ ಗುಣಮುಖರಾಗಿ ಹೊರಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

BSY

ಇಂತಹ ಸಂದರ್ಭದಲ್ಲಿ ವಿಪಕ್ಷಗಳ ಸಹಕಾರ ಬೇಕಿತ್ತು. ಇಂದು ಅನಿವಾರ್ಯ ಕಾರಣದಿಂದ ಅವರು ಸದನದಿಂದ ಹೊರಗೆ ಇದ್ದಾರೆ. ಇದು ನೋವಿನ ಸಂಗತಿ. ನಾನು ಹಸಿರು ಟವಲ್ ಹಾಕಿ ಕೃಷಿ ಬಜೆಟ್ ಮಂಡಿಸಿ, ಕೇಸರಿ ಶಾಲು ಹಾಕಿ ಹೊರಗೆ ಓಡಾಡ್ತೀನಿ ಎಂದು ಟೀಕೆ ಮಾಡಿದ್ದಾರೆ. ಕೇಸರಿ ತ್ಯಾಗದ ಸಂಕೇತ ಎನ್ನುವುದು ಅವರಿಗೆ ಗೊತ್ತಿರಲಿ ಎಂದು ಸಿಎಂ ತಿಳಿಸಿದರು.

ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದಿಂದ ಈ ಬಾರಿ 11,887 ಕೋಟಿ ರೂ. ಕಡಿತವಾಗಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದೇನೆ. ಹೀಗಾಗಿ ನಮ್ಮ ಪಾಲಿನ ಹಣ ಬಂದೇ ಬರುತ್ತದೆ ಎಂಬ ವಿಶ್ವಾಸವಿದೆ. ಕರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಸಾಲಿಗೆ ಸೇರಿದ ಕಾರಣದಿಂದಾಗಿ ಬಿಹಾರಕ್ಕಿಂತ ನಮಗೆ ಕಡಿಮೆ ಅನುದಾನ ದೊರಕಿದೆ. ಈ ತಾಂತ್ರಿಕ ಸಮಸ್ಯೆ ಬಗ್ಗೆ ಗಮನ ಹರಿಸುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *