ಬೆಂಗಳೂರು: ದೇಶದಲ್ಲಿ ದಿನ ಕಳೆದಂತೆ ಕೊರೊನಾ ಮಹಾಮಾರಿ ಅಟ್ಟಹಾಸ ಜೋರಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರ ರಾಜ್ಯ ದೇಶದ ಕೊರೊನಾ ವೈರಸ್‍ಗೆ ತವರುಮನೆಯಾಗಿದೆ. ಏಷ್ಯಾದ ಅತಿದೊಡ್ಡ ಕೊಳಗೇರಿ ಎಂದೇ ಪ್ರಸಿದ್ಧವಾಗಿದ್ದ ಧಾರಾವಿ ಸ್ಲಂನಲ್ಲೂ ಕೊರೊನಾ ಮಹಾಮಾರಿ ಆರ್ಭಟ ನಡೆಸುತ್ತಿದೆ. ಇದೀಗ ಧಾರಾವಿ ಸ್ಲಂನಂತೆ ಬೆಂಗಳೂರಿನ ಒಂದು ಸ್ಲಂ ಕೊರೊನಾಕ್ಕೆ ಸಾಕ್ಷಿಯಾಗುತ್ತಿದೆ.
ಸಿಲಿಕಾನ್ ಸಿಟಿಯ ಪಾದರಾಯನಪುರ ಸ್ಲಂನಂತೆ ಇರುವ ವಾರ್ಡ್. ಇಲ್ಲಿನ ಮನೆಗಳು ಒಂದರ ಪಕ್ಕ ಒಂದರಂತೆ ಇದ್ದು, ಹೆಚ್ಚಿನ ಜನಸಂಖ್ಯೆ ಇರುವ ಜಾಗವಾಗಿದೆ. ಈಗ ಈ ವಾರ್ಡ್ ಬೆಂಗಳೂರಿನ ಧಾರಾವಿಯಾಗುತ್ತಿದೆ. ಇದನ್ನೂ ಓದಿ: ಧಾರಾವಿ ಸ್ಲಂನಲ್ಲಿ ಕೊರೊನಾ ನಿಯಂತ್ರಣ ಅಸಾಧ್ಯ ಯಾಕೆ? ಜನಸಾಂದ್ರತೆ ಎಷ್ಟಿದೆ?
ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 23 ಕೇಸ್‍ಗಳು ಇದೇ ವಾರ್ಡಿನಲ್ಲಿ ದಾಖಲಾಗಿವೆ. ನಿಜಾಮುದ್ದೀನ್ ಜಮಾತ್‍ನಲ್ಲಿ ಭಾಗವಹಿಸಿದ್ದರಿಂದ ಈ ಭಾಗದಲ್ಲಿ ಹೆಚ್ಚು ಪಾಸಿಟಿವ್ ಕೇಸ್ ಕಂಡುಬಂದಿದೆ. ರೋಗಿ ನಂ 167 ಮತ್ತು 168 ಮಾರ್ಚ್ 13 ರಂದು ದೆಹಲಿಯ ನಿಜಾಮುದ್ದೀನ್ ಜಮಾತ್‍ನಲ್ಲಿ ಭಾಗವಹಿಸಿದ್ದರು. ಇವರು ಜಮಾತ್‍ನಿಂದ ವಾಪಸ್ ಬಂದ ಮೇಲೆ ಅವರ ಮನೆ ಅಕ್ಕಪಕ್ಕ ಮತ್ತು ಬಾಡಿಗೆ ಇದ್ದವರಿಗೂ ಕೊರೊನಾ ಬಂದಿದೆ. ಈಗ ವಾರ್ಡ್ ಪೂರ್ತಿ ಹಬ್ಬುವ ಸಾಧ್ಯತೆ ಇದ್ದು, ಮತ್ತೊಂದು ಧಾರಾವಿಯಾಗುವ ಸಾಧ್ಯತೆ ಇದೆ.
ಪಾದರಾಯನಪುರದಲ್ಲಿ ಕೇಸ್‍ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಡೀ ವಾರ್ಡ್ ಸೀಲ್‍ಡೌನ್ ಮಾಡಿದರೂ ಸಹ ಜನ ಮಾತ್ರ ಯಾವುದಕ್ಕೂ ಕ್ಯಾರೆ ಅನ್ನದೇ, ಸಾಮಾಜಿಕ ಅಂತರವೂ ಕಾಯ್ದುಕೊಳ್ಳದೆe ಓಡಾಡುತ್ತಿದ್ದಾರೆ.
ದೇಶದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 15 ಸಾವಿರ ಗಡಿ ಹತ್ತಿರ ಬಂದು ನಿಂತಿದ್ದು, ಮಹಾರಾಷ್ಟ್ರದಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಸೋಂಕಿನಿಂದ ಆಸ್ಪತ್ರೆಗೆ ಸೇರಿದ್ದಾರೆ. ಅದರಲ್ಲೂ ಮುಂಬೈ ನಗರದಲ್ಲೇ 2,000ಕ್ಕೂ ಹೆಚ್ಚು ರೋಗಿಗಳಿದ್ದಾರೆ. ಆದರೆ ಧಾರಾವಿ ಸ್ಲಂನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದ್ದು, 10 ಜನರು ಮೃತಪಟ್ಟಿದ್ದಾರೆ. ಇನ್ನೂ ಧಾರಾವಿ ಸ್ಲಂನಲ್ಲಿ 10 ಲಕ್ಷ ಜನಸಂಖ್ಯೆಯ ಇದ್ದು, ಇನ್ನೂ ಹೆಚ್ಚಿನ ಜನಕ್ಕೆ ಸೋಂಕು ಹರಡುವ ಸಾಧ್ಯತೆ ಇದೆ.