ಇದ್ದಕ್ಕಿದ್ದಂತೆ ರಸ್ತೆ ಮೇಲೆ ನೋಟುಗಳ ಮಳೆ

Public TV
1 Min Read
note rain

– ಕೊರೊನಾ ಭೀತಿಗೆ ದುಡ್ಡು ಮುಟ್ಟದ ಜನ
– ಕೋಲಿನಿಂದ ಹಣ ಆರಿಸಿದ ಪೊಲೀಸರು
– ಈಗ ಲ್ಯಾಬ್ ಪರೀಕ್ಷೆಗೆ ನೋಟುಗಳು

ಇಂಧೋರ್: ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ರಸ್ತೆಯಲ್ಲಿ ನೋಟುಗಳ ಸುರಿಮಳೆಗೈದಿರುವ ಘಟನೆ ಮಧ್ಯಪ್ರದೇಶದ ಇಂಧೋರ್‍ನ ಖಾತಿರ್‍ಪುರ ಪ್ರದೇಶದ ಧರ್ಮಶಾಲಾದಲ್ಲಿ ನಡೆದಿದೆ.

ಮೊದಲೇ ಕೊರೊನಾ ವೈರಸ್ ಭೀತಿಯಿಂದ ತತ್ತರಿಸಿರುವ ಇಂಧೋರ್ ನಲ್ಲಿ ಈ ರೀತಿ ಘಟನೆ ನಡೆದಿರುವುದು ಆತಂಕವನ್ನು ಸೃಷ್ಟಿಸಿದೆ. ಅಪರಿಚಿತ ವ್ಯಕ್ತಿಯೋರ್ವ ರಸ್ತೆ ಮೇಲೆ 500, 200, 100, 50 ಹಾಗೂ 10 ರೂ. ಮುಖಬೆಲೆಯ ನೋಟುಗಳನ್ನು ಎಸೆದು ಹೋಗಿದ್ದಾನೆ. ಸಾವಿರಾರು ರೂ. ಹಣ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೂ ಕೊರೊನಾ ಭೀತಿಯಿಂದ ಯಾರೊಬ್ಬರು ಅದನ್ನು ತೆಗೆದುಕೊಳ್ಳುವ ಸಹಾಸಕ್ಕೆ ಮುಂದಾಗಲಿಲ್ಲ.

ಇಷ್ಟೆಲ್ಲಾ ಹಣವನ್ನು ಯಾರೂ ರಸ್ತೆ ಮೇಲೆ ಎಸೆಯುವುದಿಲ್ಲ. ಬಹುಶಃ ನೋಟುಗಳಲ್ಲಿ ಕೊರೊನಾ ವೈರಸ್ ರೋಗಾಣುಗಳನ್ನು ಲೇಪಿಸಿ ಎಸೆದಿರಬಹುದು ಎಂದು ಸಾರ್ವಜನಿಕರಲ್ಲಿ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಜನರು ನೋಟುಗಳನ್ನು ಮುಟ್ಟದೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮಾಸ್ಕ್, ಗ್ಲೌಸ್ ಹಾಕಿಕೊಂಡು ನೋಟುಗಳನ್ನು ಕೋಲಿನಿಂದ ಆಯ್ದುಕೊಂಡು ಬ್ಯಾಗ್‍ಗೆ ತುಂಬಿಸಿಕೊಂಡಿದ್ದು, ಇದನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಿದ್ದಾರೆ.

note rain 1

ರಸ್ತೆಯಲ್ಲಿ ಹೀಗೆ ಹಣ ಎಸೆದು ಹೋಗಿದ್ದು ಯಾಕೆ? ಯಾರು ಹೀಗೆ ಮಾಡಿದ್ದಾರೆ ಎನ್ನುವ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ. ನೋಟುಗಳ ಮೂಲಕವೂ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ರಸ್ತೆ ಮೇಲೆ ಬಿದ್ದಿದ್ದ ನೋಟುಗಳನ್ನು ಮುಟ್ಟಲು ಇಂಧೋರ್ ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡ ಹಿಂದೇಟು ಹಾಕಿದ್ದರು.

ಸದ್ಯ ಕೊರೊನಾ ವೈರಸ್ ಹಾಟ್‍ಸ್ಪಾಟ್ ಎನಿಸಿಕೊಂಡಿರುವ ಮಧ್ಯಪ್ರದೇಶದ ಇಂಧೋರ್ ನಲ್ಲಿ ಈ ಘಟನೆ ನಡೆದಿರೋದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲು ಪೊಲೀಸರು ಅದನ್ನು ಆರಿಸುತ್ತಿರುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈವರೆಗೆ ಮಧ್ಯಪ್ರದೇಶ ರಾಜ್ಯಾದ್ಯಂತ 1,164 ಮಂದಿಗೆ ಸೋಂಕು ತಗುಲಿದ್ದು, ಇಂಧೋರ್ ಒಂದರಲ್ಲೇ 707 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈವರೆಗೆ 55 ಮಂದಿ ಸಾವನ್ನಪ್ಪಿದ್ದು, 70 ಮಂದಿ ಗುಣಮುಖರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *