ಮಂಗಳೂರು: ವಿಶ್ವ ಹಿಂದೂ ಪರಿಷತ್, ಭಜರಂಗ ದಳದ ವತಿಯಿಂದ ನಡೆಯಬೇಕಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಮುಂದೂಡಲಾಗಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಬಂದಿದ್ದ ಮಧ್ಯಪ್ರದೇಶದ ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ವಾಪಸ್ ಆಗಿದ್ದಾರೆ.
ಕೊರೊನಾ ವೈರಸ್ ತೀವ್ರಗತಿಯಲ್ಲಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಇಂದಿನಿಂದ ಸಾರ್ವಜನಿಕವಾಗಿ ಯಾವುದೇ ಸಭೆ, ಸಮಾರಂಭಗಳನ್ನು ನಡೆಸದಂತೆ ಆದೇಶ ನೀಡಿತ್ತು. ಹೀಗಾಗಿ ಭಾನುವಾರ ದಕ್ಷಿಣ ಕನ್ನಡದ ವಿಟ್ಲದ ಪಂಚಲಿಂಗೇಶ್ವರ ದೇವರ ರಥದ ಗದ್ದೆಯಲ್ಲಿ ನಡೆಯಬೇಕಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇಟಲಿ, ಡೆನ್ಮಾರ್ಕ್ ಬಳಿಕ ಕುವೈತ್ ಸಂಪೂರ್ಣ ಬಂದ್
ಈ ಮಧ್ಯೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಲು ಆಗಮಿಸಿದ್ದರು. ಆದರೆ ಕಾರ್ಯಕ್ರಮ ಮುಂದೂಡಿಕೆಯ ಹಿನ್ನೆಲೆಯಲ್ಲಿ ನೆಲಪ್ಪಾಲ್ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಹನುಮಗಿರಿ ಆಂಜನೇಯ ಕ್ಷೇತ್ರಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.