ಮಂಗಳೂರು: ಕೊರೊನಾ ವೈರಸ್ ಭೀತಿ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೂ ತಟ್ಟಿದ್ದು, ಇಂದಿನಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನ ಸ್ಥಗಿತವಾಗಲಿದೆ.
ಜಿಲ್ಲಾಡಳಿತದ ಆದೇಶದ ಮೇರೆಗೆ ಯಕ್ಷಗಾನ ಪ್ರದರ್ಶನಗಳು ಸ್ಥಗಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಟೀಲು ಯಕ್ಷಗಾನ ಮೇಳದ ತಿರುಗಾಟವೂ ಬಂದ್ ಆಗಲಿದೆ. ಇಂದಿನಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಯಕ್ಷಗಾನಕ್ಕೆ ತಡೆ ಬಿದ್ದಿದೆ. ಆದರೆ ಯಕ್ಷಗಾನ ನಿಲ್ಲಬಾರದೆಂಬ ನಂಬಿಕೆ ಇರುವ ಹಿನ್ನಲೆಯಲ್ಲಿ ಕಟೀಲು ದೇವಸ್ಥಾನದ ಮುಂಭಾಗ ಒಂದು ಗಂಟೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಸಂಜೆ 7 ಗಂಟೆಯಿಂದ 8 ಗಂಟೆ ತನಕ ಪ್ರದರ್ಶನ ನಡೆಯಲಿದೆ ಎಂದು ಕಟೀಲು ಯಕ್ಷಗಾನ ಮೇಳ ಆಡಳಿತ ಮಂಡಳಿ ಹಾಗೂ ದೇವಳದ ಪ್ರಧಾನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಮಾಹಿತಿ ನೀಡಿದ್ದಾರೆ.
Advertisement
Advertisement
ಕೊರೊನಾ ಮಹಾಮಾರಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಕಟೀಲು ಯಕ್ಷಗಾನ ಮೇಳದ ತಿರುಗಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇಂದಿನಿಂದ ಕಟೀಲು ಆರು ಮೇಳಗಳ ಯಕ್ಷಗಾನ ಪ್ರದರ್ಶನ ಜಿಲ್ಲಾಧಿಕಾರಿಗಳ ಮುಂದಿನ ಆದೇಶದ ವರೆಗೆ ಇರುವುದಿಲ್ಲ. ಆದರೆ ಮೇಳ ಹೊರಟ ಮೇಲೆ ಯಕ್ಷಗಾನ ನಿಲ್ಲಬಾರದೆಂಬ ನಂಬಿಕೆ ಇದೆ. ಇದೂ ಕೂಡ ದೇವರ ಪೂಜೆ ಎಂಬುದು ಇಲ್ಲಿಯ ನಂಬಿಕೆ. ಹೀಗಾಗಿ ಮೇಳದ ದೇವರಿಗೆ ಅರ್ಚಕರು ತ್ರಿಕಾಲಪೂಜೆ ಮಾಡುತ್ತಾರೆ ಎಂದು ಮಂಡಳಿ ತಿಳಿಸಿದೆ.
Advertisement
ರಂಗಸ್ಥಳದಲ್ಲಿ ಕಟ್ಟೇಶ (ಬಾಲಗೋಪಾಲ) ವೇಷದವರು ಕುಣಿದು ಆರತಿ ಮಾಡುತ್ತಾರೆ. ಅಲ್ಲಿಯವರೆಗಿನ ವ್ಯವಸ್ಥೆ ದೇವರ ಪೂಜೆ ಎಂಬ ನಂಬಿಕೆ ಇದೆ. ಅದೇ ರೀತಿ ಮುಖ್ಯ ಸ್ತ್ರೀ ವೇಷದ ನಂತರ ಯಕ್ಷಗಾನ ಪ್ರದರ್ಶನ ಎನ್ನುವ ಕಲ್ಪನೆಯೂ ಇದೆ. ಈ ಹಿನ್ನಲೆಯಲ್ಲಿ ದೇವರ ಪೂಜಾರೂಪವಾದ ಯಕ್ಷಗಾನವನ್ನು ಮಾತ್ರ ಕಟೀಲು ರಥಬೀದಿಯಲ್ಲಿ ಇಂದಿನಿಂದ ನಡೆಸಲಾಗುವುದು ಎಂದು ಮಾಹಿತಿ ನೀಡಿದೆ.
Advertisement
ಸಂಜೆ ಏಳು ಗಂಟೆಗೆ ಆರೂ ಮೇಳಗಳ ದೇವರ ಪೂಜೆಯನ್ನು ಬಿಡಾರದಲ್ಲಿಯೇ ನೆರವೇರಿಸಿ, ಅಲ್ಲಿಂದ ರಂಗಸ್ಥಳಕ್ಕೆ ಕುಕ್ಕೇಶ(ಕೋಡಂಗಿ) ಬರಲಿದೆ. ಸೀಮಿತ ಹಾಡುಗಳ ನಂತರ ಕುಕ್ಕೇಶ(ಬಾಲಗೋಪಾಲ) ಬಂದು ಕುಣಿದಾಗ ಆರೂ ಮೇಳದ ದೇವರು ರಂಗಸ್ಥಳಕ್ಕೆ ಬರಲಿದ್ದಾರೆ ದೇವರ ಪೂಜೆ ಬಾಲಗೋಪಾಲ ವೇಷದವರು ನೆರವೇರಿಸಿದ ನಂತರ ಮೇಳದ ದೇವರ ಪೂಜಾವಿಧಿಗಳು ಶಾಸ್ತ್ರೋಕ್ತವಾಗಿ ಹಾಗೂ ಸಾಂಪ್ರದಾಯಿಕವಾಗಿ ಮುಗಿಯುತ್ತದೆ. ಅಲ್ಲಿಗೆ ಯಕ್ಷಗಾನ ಮುಗಿಸಿ ದೇವರಿಗೆ ಬಿಡಾರದಲ್ಲಿ ಪುನಃ ಅರ್ಚಕರು ಪೂಜೆ ಮಾಡಿದ ನಂತರ ಇಡೀ ಪ್ರಕ್ರಿಯೆ ಮುಗಿಯಲಿದೆ ಎಂದು ತಿಳಿಸಿದೆ.
ದೇವಳದ ಮುಂಭಾಗ ಸುಮಾರು ಅರ್ಧ ಗಂಟೆ ಮಾತ್ರ ಈ ವಿಧಿ ನೆರವೇರಲಿದೆ. ದ.ಕ ಜಿಲ್ಲಾಡಳಿತದ ಸೂಚನೆ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಭಕ್ತಾದಿಗಳ ಭಾಗವಹಿಸುವಿಕೆಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.