ನವದೆಹಲಿ: ಕೊರೊನಾ ವೈರಸ್ ಹರಡಿಸಿ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಪಾಕ್ ಸ್ನೇಹಿತ ಚೀನಾ ಈಗ ಜಮ್ಮು ಕಾಶ್ಮೀರ ವಿಚಾರವನ್ನು ಮತ್ತೆ ಕೆದಕಿದೆ. ಚೀನಾದ ಈ ಬುದ್ಧಿಗೆ ಭಾರತ, ಜಮ್ಮು ಕಾಶ್ಮೀರ ನಮ್ಮ ಆಂತರಿಕ ವಿಚಾರ. ಈ ಬಗ್ಗೆ ಯಾರೂ ಮಾತನಾಡುವ ಅಗತ್ಯವಿಲ್ಲ ಎಂದು ಹೇಳಿ ತಿರುಗೇಟು ನೀಡಿದೆ.
ವಿಶ್ವಸಂಸ್ಥೆಯ ಚೀನಾದ ಶಾಶ್ವತ ಪ್ರತಿನಿಧಿತ್ವ ಮಿಶನ್ ವಕ್ತಾರರು, ಜಮ್ಮು ಕಾಶ್ಮೀರ ವಿಶ್ವಸಂಸ್ಥೆಯ ಭದ್ರತಾ ಕಾರ್ಯಸೂಚಿಯಲ್ಲಿ ಉಳಿದಿದೆ. ಕಾಶ್ಮೀರ ವಿಚಾರವನ್ನು ಚೀನಾ ಸೂಕ್ಷ್ಮವಾಗಿ ಗಮನಿಸುತ್ತದೆ. ಈ ವಿಚಾರವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು ಎಂದು ಹೇಳಿದ್ದರು.
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಶ್ರೀವತ್ಸವ, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಮುಂದೆಯೂ ಇದು ಭಾರತ ದೇಶದ ಭಾಗವಾಗಿಯೇ ಮುಂದುವರಿಯುತ್ತದೆ. ಜಮ್ಮು ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂದು ಹೇಳಿ ತಿರುಗೇಟು ನೀಡಿದ್ದಾರೆ.
ಲಡಾಖ್ ಪ್ರದೇಶದ ಹಲವು ಭಾಗ ತನಗೆ ಸೇರಿದ್ದು ಎಂದು ಚೀನಾ ವಾದಿಸುತ್ತಿದೆ. ಈ ಮಧ್ಯೆ ಕಳೆದ ವರ್ಷ ಕೇಂದ್ರಾಡಳಿತ ಪ್ರದೇಶವನ್ನಾಗಿ ಲಡಾಖ್ ಘೋಷಣೆ ಮಾಡಿದ್ದು ಚೀನಾದ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರಣಕ್ಕಾಗಿ ಆಗಾಗ ಜಮ್ಮು ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪ ಮಾಡುತ್ತಿದೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ಚೀನಾ ವಿಶ್ವಸಂಸ್ಥೆಯ ಭದ್ರತಾ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಆದರೆ ಭಾರತ ಭದ್ರತಾ ಸಮಿತಿಯ ಉಳಿದ ರಾಷ್ಟ್ರಗಳ ಜೊತೆ ಉತ್ತಮ ಸಂಪರ್ಕ ಹೊಂದಿದ್ದ ಕಾರಣ ಚೀನಾದ ಪ್ರಯತ್ನ ಸಫಲವಾಗಲಿಲ್ಲ.