ಚಿಕ್ಕಮಗಳೂರು: ಪ್ರತಿನಿತ್ಯ ಊರಿನ ಕಸವನ್ನ ಕೊಂಡೊಯ್ಯುವ ಆಟೋದಲ್ಲಿ ಪಡಿತರ ಅಕ್ಕಿಯನ್ನ ಸಾಗಿಸಿದ್ದಕ್ಕೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.
ಕೊರೊನಾ ವೈರಸ್ ಕಾಟ ಆರಂಭವಾದಾಗಿನಿಂದ ದೇಶ ಸೇರಿದಂತೆ ಜಗತ್ತೇ ತತ್ತರಿಸಿ ಹೋಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ಮಧ್ಯೆ ರಾಜ್ಯದಲ್ಲಿ ಜನಸಾಮಾನ್ಯರಿಗೆ ಪಡಿತರ ಸಮಸ್ಯೆ ಉದ್ಭವಿಸದಂತೆ ಸರ್ಕಾರ ಮುಂಗಡವಾಗಿ ಮೂರು ತಿಂಗಳ ಪಡಿತರ ಸಾಮಾಗ್ರಿಗಳನ್ನು ನೀಡಲು ತೀರ್ಮಾನಿಸಿ, ಅಕ್ಕಿಯನ್ನ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಿದೆ.
Advertisement
Advertisement
ಕೊಪ್ಪದ ಜಯಪುರದಲ್ಲಿ ಪಡಿತರ ನೀಡಲು ಆರಂಭಿಸಿದ್ದರು. ಕಾರ್ಡ್ ಇರುವವರು ರೇಷನ್ ಕಾರ್ಡ್ ಮತ್ತು ಓಟಿಪಿಗಾಗಿ ಮೊಬೈಲ್ ತಂದು ಬಿಲ್ ಮಾಡಿಸಿಕೊಂಡಿದ್ದು, ಸೊಸೈಟಿ ಆಡಳಿತ ಮಂಡಳಿ ಮನೆ-ಮನೆಗೆ ಪಡಿತರ ತಲುಪಿಸಲು ನಿರ್ಧರಿಸಿತ್ತು. ಆದರೆ ಅಧಿಕಾರಿಗಳು ದಿನನಿತ್ಯ ಊರಿನ ಕಸವನ್ನ ಕೊಂಡೊಯ್ಯುವ ವಾಹನಕ್ಕೆ ಪ್ಲಾಸ್ಟಿಕ್ ಚೀಲ ಹಾಸಿ ಅಕ್ಕಿಯನ್ನ ಸರಬರಾಜು ಮಾಡಿದ್ದಾರೆಂದು ಆರೋಪಿಸಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
Advertisement
ಪಡಿತರವನ್ನ ಸಾಗಿಸಲು ಯಾರಿಗೆ ವಾಹನ ಕೇಳಿದರೂ ಗ್ರಾಮಸ್ಥರು ವಾಹನ ನೀಡುತ್ತಿದ್ದರು. ಆಟೋ ಹಾಗೂ ಗೂಡ್ಸ್ ಗಾಡಿಯವರು ತಾವೇ ಪಡಿತರ ಸಾಗಿಸಲು ಸಹಕರಿಸುತ್ತಿದ್ದರು. ಆದರೆ ಪಂಚಾಯ್ತಿ ಹಾಗೂ ಸೊಸೈಟಿಯವರು ಬಡವರ ಮನೆಗೆ ಅಕ್ಕಿ ಸಾಗಿಸಲು ಇಂತಹ ಕೆಲಸ ಮಾಡಬಾರದಿತ್ತು ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.