ಕ್ವಾರಂಟೈನ್ ಕೇಂದ್ರದಲ್ಲಿ ಅವ್ಯವಸ್ಥೆ- ಎಲ್ಲರಿಗೂ ಒಂದೇ ಕುಡಿಯುವ ನೀರಿನ ಪಾತ್ರೆ

Public TV
1 Min Read
ctd quarentine centre

– ಜಿಲ್ಲಾಡಳಿತದ ಸಂಪೂರ್ಣ ನಿರ್ಲಕ್ಷ್ಯ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾಡಳಿತದ ಮತ್ತೊಂದು ನಿರ್ಲಕ್ಷ್ಯ ಬಯಲಾಗಿದ್ದು, ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಕನಿಷ್ಠ ಸೌಲಭ್ಯವನ್ನೂ ನೀಡದೆ ನಿರ್ಲಕ್ಷ್ಯ ವಹಿಸಿದೆ. ಕ್ವಾರಂಟೈನ್‍ನಲ್ಲಿರುವವರು ಪರದಾಡುವಂತಾಗಿದೆ.

vlcsnap 2020 05 10 10h38m24s233

ನಗರದ ಕಲಾ ಕಾಲೇಜು ಸಮೀಪದಲ್ಲಿರುವ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಯಿಂದ ಕೂಡಿದ್ದು, ಕ್ವಾರಂಟೈನ್ ಕೇಂದ್ರದಲ್ಲಿರುವ ವ್ಯಕ್ತಿ ವಿಡಿಯೋ ಮೂಲಕ ಅನಾವರಣಗೊಳಿಸಿದ್ದಾರೆ. ಮಲಗಲು ಹಾಸಿಗೆ ಇಲ್ಲ, ಊಟ ಸರಿ ಇಲ್ಲ, ಎಲ್ಲರಿಗೂ ಒಂದೇ ಶೌಚಾಲಯ, ಕುಡಿಯುವ ನೀರಿನ ಪಾತ್ರೆ ಕೂಡ ಒಂದೆಯಾಗಿದ್ದು, ಇದರಿಂದಾಗಿ ಕ್ವಾರಂಟೈನಲ್ಲಿರುವವರು ಭಯದಲ್ಲೇ ಬದುಕುತ್ತಿದ್ದಾರೆ. ಒಬ್ಬರಿಗೆ ಕೊರೊನಾ ಸೋಂಕು ತಗುಲಿದ್ದರೆ ಇತರರಿಗೂ ಹರಡುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

vlcsnap 2020 05 10 10h39m02s90

ಸೊಳ್ಳೆಗಳ ಕಾಟಕ್ಕೆ ಕ್ವಾರಂಟೈನ್ ಕೇಂದ್ರದಲ್ಲಿರುವ ಬೇರೆ ಜಿಲ್ಲೆಯವರು ನಲುಗಿ ಹೋಗಿದ್ದು, ರಾಜ್ಯದ ವಿವಿಧೆಡೆಗಳಿಂದ ಬಂದಿರುವ 15ಕ್ಕೂ ಹೆಚ್ಚು ಜನರನ್ನು ಈ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ವಿವಿಧೆಡೆಗಳಿಂದ ಬಂದವರನ್ನು ಒಂದೇ ಕಡೆ ಕೂಡಿ ಹಾಕಿದ್ದು, ಸರಿಯಾದ ವ್ಯವಸ್ಥೆಯನ್ನು ಸಹ ಮಾಡಿಲ್ಲ. ಇದರಿಂದಾಗಿ ಒಬ್ಬರಿಂದ ಮತ್ತೊಬ್ಬರಿಗೆ ಕೊರೊನಾ ಹರಡುತ್ತದೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವವರು ಅಳಲು ತೋಡಿಕೊಳ್ಳುತ್ತಿದ್ದಾರೆ.

vlcsnap 2020 05 10 10h37m52s157

ನಮಗೆ ಕರೊನಾ ಇಲ್ಲ, ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಆದರೆ ಈ ಅವ್ಯವಸ್ಥೆಯಿಂದಾಗಿ ಬೇರೆಯವರಿಂದ ನಮಗೆ ಸೋಂಕು ಆವರಿಸುವ ಭೀತಿ ಎದುರಾಗಿದೆ. ನಮಗೆ ಕರೊನಾ ಸೋಂಕು ತಗುಲಿದರೆ ಜಿಲ್ಲಾಡಳಿತ, ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ನಮ್ಮನ್ನು ಬೇರೆಡೆ ಸ್ಥಳಾಂತರಿಸಿ ಎಂದು ಯುವಕ ವಿಡಿಯೋದಲ್ಲಿ ಮನವಿ ಮಾಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *